ವಿಜಯನಗರ (ಬಳ್ಳಾರಿ):ಲವರ್ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದ ಮಗಳನ್ನು ಹುಡುಕಿಕೊಂಡು ಮನೆಗೆ ಕರೆತಂದ ಕುಟುಂಬಸ್ಥರು ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲೊಂದು ಮರ್ಯಾದಾ ಹತ್ಯೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಅನ್ಯ ಜಾತಿಯ ಯುವಕನೊಂದಿಗೆ ಓಡಿ ಹೋದಳು ಎಂಬ ಕಾರಣವೊಡ್ಡಿ 17 ವರ್ಷದ ಅಪ್ರಾಪ್ತೆಯನ್ನ ರಾತ್ರೋರಾತ್ರಿ ಕೊಲೆಗೈದು, ಸುಟ್ಟು ಹಾಕಿರೋದು ತಡವಾಗಿ ಬೆಳಕಿಗೆ ಬಂದಿದೆ.
ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ...
ಹರಪನಹಳ್ಳಿಯ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಯುವತಿಗೆ ಮನೆ ಎದುರಿನ ಯುವಕನೊಂದಿಗೆ ಲವ್ ಆಗಿತ್ತು. ಕಳೆದ ಮೂರು ದಿನದ ಹಿಂದೆ ಇಬ್ಬರು ಗ್ರಾಮ ಬಿಟ್ಟು ಪಕ್ಕದ ಗ್ರಾಮಕ್ಕೆ ತೆರಳಿದ್ದರು. ಮಗಳ ಪ್ರೀತಿ ಅರಿಯದ ಕುಟುಂಬಸ್ಥರು ಗ್ರಾಮದಲ್ಲಿ ಮಗಳನ್ನು ಹುಡುಕಿದ್ದಾರೆ. ಬಳಿಕ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು.
ಮೂರು ದಿನಗಳ ಹಿಂದೆ ಯುವಕನೊಂದಿಗೆ ಓಡಿ ಹೋಗಿ ಬಾಲಕಿ ಮದುವೆ ಆಗುವ ಕನಸಿನೊಂದಿಗೆ ತಂಗಿದ್ದಳು. ಈ ವಿಷಯ ಕುಟುಂಬಸ್ಥರಿಗೆ ತಿಳಿದಿದೆ. ಕೂಡಲೇ ಅವರಿಬ್ಬರನ್ನು ಪತ್ತೆ ಹಚ್ಚಿ ಗ್ರಾಮಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.
ಬಾಲಕಿಯ ಪ್ರೇಮ ಪುರಾಣ ಗ್ರಾಮದ ಪಂಚಾಯ್ತಿಯಲ್ಲಿ ಚರ್ಚೆಯಾಗಿತ್ತು. ಬಾಲಕಿ ಮನವೋಲಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಆದ್ರೆ ಹುಡುಗಿ ಯಾವುದೇ ಕಾರಣಕ್ಕೂ ತಾನು ತನ್ನ ಪ್ರಿಯಕರನ ಬಿಟ್ಟಿರುವುದಿಲ್ಲ ಎಂದು ಹೇಳಿದ್ದಾಳೆ. ಬಳಿಕ ಗ್ರಾಮದ ಹಿರಿಯರು ಇಬ್ಬರಿಗೂ ಬುದ್ಧಿ ಮಾತುಗಳನ್ನು ಹೇಳಿ ತಮ್ಮ ತಮ್ಮ ಮನೆಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ಹುಡುಗಿ ಕಡೆಯವರು ಬಾಲಕಿಗೆ ಬಲವಂತವಾಗಿ ವಿಷ ಪದಾರ್ಥ ನೀಡಿದ್ದಾರೆ. ಇದನ್ನು ತಿಂದು ಅಸ್ವಸ್ಥಗೊಂಡ ಬಾಲಕಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಗ್ರಾಮದ ಹೊರಕ್ಕೆ ಕರೆದೊಯ್ದು ಗೋಣು ತಿರುಚಿ, ಬಡಿದು ಸಾಯಿಸಿದಲ್ಲದೇ ತಮ್ಮದೇ ಹೊಲದಲ್ಲಿ ಆಕೆಯನ್ನ ಸುಟ್ಟು ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ವೇಳೆ ಬಾಲಕಿಯ ತಂದೆ, ತಾಯಿಯನ್ನು ಮನೆಯ ಮಂದಿ ಬಲವಂತವಾಗಿ ಮನೆಯಲ್ಲೇ ಕೂಡಿ ಹಾಕಿದ್ದಾರೆ ಎನ್ನಲಾಗಿದ್ದು, ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.
ಪೊಲೀಸರ ಪ್ರಕಾರ, ಬಾಲಕಿ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆ ಮಾಡದೇ ಕುಟುಂಬಸ್ಥರು ಬಾಲಕಿ ದೇಹವನ್ನ ಸುಟ್ಟಿದ್ದಾರೆ. ಈಗಾಗಲೇ ಬೇರೊಬ್ಬ ಹುಡುಗನೊಂದಿಗೆ ಬಾಲಕಿಗೆ ನಿಶ್ಚಿತಾರ್ಥ ಸಹ ಆಗಿತ್ತು. ಅಷ್ಟರೊಳಗೆ ಬಾಲಕಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಅವರಿಬ್ಬರನ್ನೂ ಕರೆತಂದು ಬುದ್ಧಿ ಹೇಳಿ ಅವರವರ ಮನೆಗೆ ಗ್ರಾಮಸ್ಥರು ಕಳಿಸಿಕೊಟ್ಟಿದ್ದರು. ಅಷ್ಟರಲ್ಲೇ ಈ ಘಟನೆ ನಡೆದು ಹೋಗಿದೆ ಎಂದು ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ‘ಈಟಿವಿ ಭಾರತ’ಕ್ಕೆ ತಿಳಿಸಿದ್ದಾರೆ.
ಈ ಘಟನೆ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತನಿಖೆ ಬಳಿಕವೇ ತಿಳಿದು ಬರಲಿದೆ.
ಓದಿ:ಶರಣಾಗಲು ಸೂಚಿಸಿದರೂ ಹಲ್ಲೆಗೆ ಮುಂದಾದ ರೌಡಿಶೀಟರ್ ಕಾಲಿಗೆ ಗುಂಡೇಟು