ಬಳ್ಳಾರಿ:ಐತಿಹಾಸಿಕ ವಸ್ತುಗಳನ್ನು ಶೇಖರಿಸಿಡಲು ಮ್ಯೂಸಿಯಂ ನಿರ್ಮಿಸಲಾಗುತ್ತದೆ. ಆದರೆ, ಗಣಿನಾಡು ಬಳ್ಳಾರಿಯ ವ್ಯಕ್ತಿಯೊಬ್ಬ ಗಣೇಶನಿಗಾಗಿಯೇ ಸಂಗ್ರಹಾಲಯ ಒಂದನ್ನು ರೂಪಿಸಿದ್ದಾರೆ. ಇಲ್ಲಿ 550 ಕ್ಕೂ ಅಧಿಕ ಗಣೇಶನ ಮೂರ್ತಿಗಳು ಕಾಣಸಿಗುತ್ತವೆ. ಹೌದು, ಬಳ್ಳಾರಿಯ ಆದರ್ಶ ನಗರದ ನಿವಾಸಿ ಅಶೋಕ್ ಬಚಾವತ್ ಎಂಬುವರರು ಗಣೇಶನ ವಿಗ್ರಹಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಇವರ ಬಳಿ 600 ಕ್ಕೂ ಅಧಿಕ ಬಗೆಬಗೆಯ ವಿಜ್ಞವಿನಾಶಕ ಮೂರ್ತಿಗಳಿವೆ.
21 ವರ್ಷಗಳಿಂದ ಗಣೇಶ ಮೂರ್ತಿ ಸಂಗ್ರಹ: ಅಶೋಕ್ ಬಚಾವತ್ ಅವರಿಗೆ ಚಿಕ್ಕಂದಿನಿಂದಲೂ ವಿನಾಯಕ ಅಂದ್ರೆ ಭಾರಿ ಪ್ರೀತಿ, ಭಕ್ತಿ. ಹೀಗಾಗಿ ಅವರು ಗಣೇಶನ ವಿಗ್ರಹಗಳನ್ನು ಕಳೆದ 21 ವರ್ಷಗಳಿಂದ ಕಲೆ ಹಾಕುತ್ತಿದ್ದಾರೆ. ಆರಂಭದಲ್ಲಿ ಮನೆಯವರಿಗೆ ಇದು ವಿಚಿತ್ರ ಎನಿಸಿದರೂ, ತದನಂತರ ಅವರೂ ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಇನ್ನು ಕಳೆದ 13 ವರ್ಷದಲ್ಲಿ ಮೂರ್ತಿಗಳ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಮೂರ್ತಿಗಳನ್ನು ಇಡಲು ಸ್ಥಳವಿಲ್ಲದಂತಾಗಿದೆ. ಈ ಕಾರಣಕ್ಕಾಗಿ ಮಾಡಿಸಿದ್ದ ಶೋಕೇಸ್ ಕೂಡ ಭರ್ತಿಯಾಗಿದೆ. ಅಶೋಕ್ ಬಚಾವತ್ ಅವರು ಖರೀದಿ ಮಾಡಿ ತರುವ ಗಣೇಶನ ಮೂರ್ತಿಗಳು ಮನೆ ತುಂಬೆಲ್ಲಾ ಹರಡಿ ನೋಡುಗರ ಕಣ್ಮನ ಸೆಳೆಯುತ್ತಿವೆ.