ಬಳ್ಳಾರಿ:ಒಂದು ಕಾಲದಲ್ಲಿ ಗಣಿನಾಡಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ರೆಡ್ಡಿ ಸಹೋದರರು ಇಂದು ಅದೇ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ನಮಗೆ ಕಾಂಗ್ರೆಸ್ ನಾಯಕರು ಹೆಚ್ಚು ತೊಂದರೆ ಕೊಟ್ಟಿದ್ದರು. ಆದರೆ ಈಗ, ನಮ್ಮ ನಾಯಕರು ಕೂಡ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮುಸ್ಲಿಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಮುಂದೆ ಹೇಗಿರತ್ತದೆ ಎಂಬುದು ನನಗೆ ಗೊತ್ತಿಲ್ಲ. ನಾನು ಬೆಳೆಸಿದ ಪಕ್ಷದವರೇ ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ. ಕಾಂಗ್ರೆಸ್ನವರು ಕಷ್ಟ ಕೊಟ್ಟಿದ್ದಾರೆ. ಆದ್ರೆ ಬಿಜೆಪಿಯವರು ನನಗೆ ಹೆಚ್ಚಿನ ಕಷ್ಟ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ನವೆಂಬರ್ 6ರ ಬಳಿಕ ಬಳ್ಳಾರಿಯಲ್ಲಿ ಇರುವಂತಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ, ನ.6ರ ಬಳಿಕ ಬಳ್ಳಾರಿ ಬಿಡಬೇಕು. ಆದರೆ ನಾನು ಬಳ್ಳಾರಿ ಬಿಟ್ಟು ಬೆಂಗಳೂರಿಗೆ ಹೋಗಲ್ಲ. ಇಲ್ಲೇ ಆಸುಪಾಸಿನಲ್ಲಿ ಇರುತ್ತೇನೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುವ ಮೂಲಕ ರಾಜಕೀಯ ನಡೆ ಕುರಿತು ಕುತೂಹಲ ಮೂಡಿಸಿದರು.