ಬಳ್ಳಾರಿ :ಬೆರಳ ತುದಿಯಲ್ಲಿ ಮಾಹಿತಿ ಸಿಗುವ ಇಂದಿನ ಕಾಲದಲ್ಲಿ, ಗಡಿನಾಡಿನಲ್ಲಿ ಮಾತ್ರ ಹಳೆಯ ಕಾಲದ ಮಳೆ ಮಾಪನ ಮಷಿನ್ ಗಳ ಬಳೆಕೆ ಮುಂದುವರೆದಿದ್ದು ಅವುಗಳಿಗೆ ಯಾವುದೇ ಅಧುನಿಕ ಸ್ಪರ್ಶ ನೀಡಿಲ್ಲ.
ಜಲಸಂಪನ್ಮೂಲ ಇಲಾಖೆಯಿಂದ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ಅಳವಡಿಸಲಾದ ಹಿಂದಿನ ಕಾಲದ ಮಳೆ ಮಾಪನ ಮಷಿನ್ಗಳು ನೀಡುವ ಮಳೆಯ ಮಾಹಿತಿ ಅಧಿಕಾರಿಗಳಿಗೆ ತಿಳಿಸುವಷ್ಟರಲ್ಲಿ ಮಳೆಯ ಗರಿಷ್ಠ ಮತ್ತು ಕನಿಷ್ಠ ನಿಖರತೆ ನಾಶವಾಗುತ್ತಿದೆ.
ತಾಲೂಕಿನ ನಗರ ಹಾಗೂ ಪಟ್ಟಣ ಕೇಂದ್ರಗಳಲ್ಲಿ ಮಳೆ ಮಾಪನ ಮಷಿನ್ ಗಳನ್ನು ಅಳವಡಿಸಲಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ಎರಡು ಬಾರಿ ಮಳೆ ಮಾಪನ ಗೇಜ್ ಅನ್ನು ಅಳತೆ ಮಾಡಿಕೊಂಡು ಡೈರಿಯಲ್ಲಿ ಬರೆದುಕೊಂಡು ತಹಸೀಲ್ದಾರ್ ಕಚೇರಿಗೆ ಮುಟ್ಟಿಸುವ ಹೊತ್ತಿಗೆ ಮಳೆಯ ಪ್ರಮಾಣವು ಹೆಚ್ಚು- ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ.
ಮಳೆಮಾಪನ ಮಷಿನ್ ಗಳ ನಿರ್ವಹಣೆ ಕೊರತೆ
ಅಧುನಿಕ ಸ್ಪರ್ಷದಿಂದ ದೂರವಿರುವ ಗಡಿನಾಡಿ ಮಳೆ ಮಾಪನ ಯಂತ್ರಗಳು ಜಿಲ್ಲೆಯಲ್ಲಿ ಹಲವು ದಶಕಗಳಿಂದಲೂ ಮಳೆಯ ಅಳತೆಯನ್ನು ಗೋಲ್ ನಿಂದಲೆ ಮಾಡುತ್ತಿದ್ದು, ಅದಕ್ಕಾಗಿ ನಿವೃತ್ತ ನೌಕರರನ್ನು ನೇಮಿಸಲಾಗಿದೆ. ಪ್ರತಿನಿತ್ಯ ಮಳೆಮಾಪನ ಸ್ಥಳಕ್ಕಾಗಮಿಸಿ ಮಳೆಮಾಪನ ಅಳತೆ ಗೋಲ್ ಅನ್ನು ಚೆಕ್ ಮಾಡಿ ತಹಸೀಲ್ದಾರ್ ಕಚೇರಿಗೆ ವರದಿ ಒಪ್ಪಿಸೋದೇ ದೊಡ್ಡ ಕೆಲಸವಾಗಿದೆ.
ಕಳೆದ ಇಪ್ಪತ್ತು ವರ್ಷಗಳಿಂದಲೂ ಈ ಮಳೆ ಮಾಪನ ಅಳತೆ ಗೋಲ್ ಅನ್ನು ಚೆಕ್ ಮಾಡುತ್ತಿರುವೆ. ಪ್ರತಿದಿನ ಬೆಳಗ್ಗೆ 8.30ರ ಸುಮಾರಿಗೆ ಹಾಗೂ ಸಂಜೆ 5.30ರ ಸುಮಾರಿಗೆ ಈ ಅಳತೆಯ ಗೋಲ್ ಅನ್ನು ಚೆಕ್ ಮಾಡುವೆ. ಮಳೆಯ ಪ್ರಮಾಣ ಎಷ್ಟು ಸುರಿದಿದೆ ಎಂಬುದು ಈ ಮಳೆ ಮಾಪನ ಮಷಿನ್ ನಿಂದ ಗೊತ್ತಾಗಲಿದೆ ಎಂದು ಜಲ ಸಂಪನ್ಮೂಲ ಇಲಾಖೆ ನಿವೃತ್ತ ನೌಕರರ ಎಂ.ಸಂಗಪ್ಪ ಹೇಳುತ್ತಾರೆ.
ಕೇಂದ್ರಕ್ಕೆ ಮಳೆ ಮಾಹಿತಿ
ಇನ್ನು ಮಳೆ ಮಾಪನ ಮಾಹಿತಿಯನ್ನು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ನೀಡಲಾಗುತ್ತಿದ್ದು, ಜಿಲ್ಲೆಯ ಆಯಾ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಮಾತ್ರ ಈ ಮಷಿನ್ ಗಳನ್ನು ಅಳವಡಿಸಲಾಗಿದೆ. ಕೆಲವು ಮಷಿನ್ ಗಳು ದುರಸ್ತಿಯಾಗಿವೆ. ಕೇವಲ 35 ಮಷಿನ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ ಆಚಾರ್ಯ ತಿಳಿಸಿದ್ದಾರೆ.