ಬಳ್ಳಾರಿ : ಶಕ್ತಿ ಯೋಜನೆಯು ನಾನು ಜಿಲ್ಲಾ ಉಸ್ತುವಾರಿ ಸಚಿವ ಆದ ನಂತರದ ನನ್ನ ರಾಜಕೀಯ ಬದುಕಿನ ಅತ್ಯಂತ ಮಹತ್ವದ ಮೊದಲ ಕಾರ್ಯಕ್ರಮ ಎಂದು ಪರಿಶಿಷ್ಟ ಪಂಗಡ ಕಲ್ಯಾಣ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳ ಸಚಿವ ಬಿ. ನಾಗೇಂದ್ರ ಹೇಳಿದರು. ಬಳ್ಳಾರಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಏರ್ಪಡಿಸಲಾಗಿತ್ತು. ಈ ವೇಳೆ ಮಹಿಳೆಯರ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಒಂದು ಮಹತ್ವದ ಕಾರ್ಯಕ್ರಮವನ್ನು ಜಾರಿಗೆ ತಂದ ಸರ್ಕಾರಕ್ಕೆ ಧನ್ಯವಾದ ಹೇಳುವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದಾಗ ಈ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಸೂಚಿಸಿದರೆಂದು ನಾಗೇಂದ್ರ ತಿಳಿಸಿದರು.
ಇಂದು ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರ ಖುಷಿ ಗಮನಿಸಿದರೆ ನಮ್ಮ ಸರ್ಕಾರ ಹಾಗೂ ಸಿಎಂ ಅವರಿಗೆ ಮಹಿಳೆಯರ ಹಾರೈಕೆ ಸಿಕ್ಕಂತಾಗಿದೆ. ನಾರಿಯರು ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಇಂದು ರಾಜ್ಯದ ಮಹಿಳೆಯರಿಗೆ ನಿಜವಾದ ಹಬ್ಬ ಎಂದು ಹೇಳಿದ ಸಚಿವ ಬಿ. ನಾಗೇಂದ್ರ, ಮಹಿಳೆಯರು ದಿನನಿತ್ಯದ ಕೆಲಸಗಳಿಗೆ ಖರ್ಚು ಮಾಡುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಸಾರಿಗೆ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಈ ಯೋಜನೆ ತುಂಬ ಸಹಕಾರಿಯಾಗಲಿದೆ ಎಂದರು.
ದಿನನಿತ್ಯದ ಬದುಕಿನಲ್ಲಿ ಯಾರಿಗೋ ಅನಾರೋಗ್ಯ ಇದ್ದರೆ ಭೇಟಿ ಆಗಲು, ತವರು ಮನೆಗೆ ಹೋಗಿ ಬರಲು, ವ್ಯಾಪಾರ ವಹಿವಾಟು ನಡೆಸುವ ಮಹಿಳೆಯರ ಸಬಲೀಕರಣ ಈ ಯೋಜನೆಯಿಂದ ಆಗಲಿದೆ. ಅದರಲ್ಲೂ ವ್ಯಾಪಾರ ವಹಿವಾಟು ನಡೆಸುವ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಲಿದೆ. ಗ್ರಾಮೀಣ ಭಾಗದ ಮಹಿಳಾ ವ್ಯಾಪಾರಿಗಳು ಗಳಿಸುವ ಲಾಭದಲ್ಲಿ ದೊಡ್ಡ ಪಾಲು ಸಂಚಾರಕ್ಕೆ ಖರ್ಚಾಗುತ್ತಿತ್ತು. ಆದರೆ ಆ ಖರ್ಚು ತಪ್ಪಲಿದೆ. ರಾಜ್ಯದ ಯಾವುದೇ ಮಹಿಳೆಯರು ರಾಜ್ಯದ ಯಾವುದೇ ಗಡಿಯಿಂದ ಇನ್ನೊಂದು ಗಡಿವರೆಗೆ ಸಂಚರಿಸಬಹುದು ಎಂದು ನಾಗೇಂದ್ರ ಹೇಳಿದರು.
ಈ ಯೋಜನೆ ಇಡೀ ದೇಶದಲ್ಲಿ ಅಪರೂಪದ ಯೋಜನೆವಾಗಿದೆ. ದೇಶದ ಜನ ರಾಜ್ಯದತ್ತ ನೋಡುವಂತಾಗಿದೆ. ಮಹಿಳೆಯರಿಗೆ ಪ್ರಯಾಣ ಉಚಿತ ಆಗಿರುವುದರಿಂದ ಪುರುಷರ ಹಣವೂ ಉಳಿತಾಯ ಆಗಲಿದೆ. ಯೋಜನೆಯನ್ನು ಮಹಿಳೆಯರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮಾಧ್ಯಮದವರು ಯೋಜನೆ ಬಗ್ಗೆ ಧನಾತ್ಮಕ ಸುದ್ದಿ ಮಾಡಿ, ಸಹಕರಿಸಬೇಕು. ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ನಾಯಕರು, ಸಾರ್ವಜನಿಕರು ಸಹಕಾರ ನೀಡಬೇಕು. ಅದರಲ್ಲೂ ಅಧಿಕಾರಿಗಳು ಈ ಹಿಂದೆ ಹೇಗೆ ಕೆಲಸ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಇನ್ಮುಂದೆ ಎಲ್ಲರೂ ನನಗೆ ಸಹಕಾರ ನೀಡಬೇಕು ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.