ಬಳ್ಳಾರಿ: ನೀರಿನ ಟ್ಯಾಂಕ್ ಕಟ್ಟಲು ನಿರ್ಮಾಣ ಹಂತದ ಮನೆಯ ತಡೆಗೋಡೆ ಕೆಡವಿದ್ದರಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳ್ಳಾರಿ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಘಟನೆ ನಡೆದಿದೆ. ರಾಜೇಶ್, ಶೇಖಪ್ಪ, ಸುಶೀಲಮ್ಮ ಮತ್ತು ಜ್ಯೋತಿ ಆತ್ಮಹತ್ಯೆಗೆ ಯತ್ನಿಸಿದವರು. ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಮ್ಮರಚೇಡು ಗ್ರಾಮ ಠಾಣಾ ಜಮೀನಿನಲ್ಲಿ ನೀರಿನ ಟ್ಯಾಂಕ್ ಇತ್ತು. ಅದು ಸೋರುತ್ತಿದ್ದರಿಂದ ಹೊಸದಾಗಿ ಕಟ್ಟಲು ಕೆಡವಲಾಗಿತ್ತು. ಆದರೆ, ಆ ಜಾಗದಲ್ಲಿ ರಾಜೇಶ್, ಶೇಖಪ್ಪ ಅವರು ಮನೆಗೆ ತಡೆಗೋಡೆ ನಿರ್ಮಿಸಿದ್ದರು. ತಹಶೀಲ್ದಾರ್ ಬಲರಾಂ ಕಟ್ಟಿಮನಿ ಸ್ಥಳಕ್ಕೆ ತೆರಳಿ ತಡೆಗೋಡೆ ಕೆಡವಲು ಹೇಳಿದ್ದರು. ಮನೆ ಮಾಲೀಕರು ಅವರ ಮಾತು ಕೇಳದ್ದರಿಂದ ಅಧಿಕಾರಿಗಳು ಪೊಲೀಸರ ಸಹಾಯದಿಂದ ಗೋಡೆ ಕೆಡವಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಡಿಸಿ ಗನ್ ಮ್ಯಾನ್ ಕಾರಣ: "ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಒತ್ತಡ ಹೇರಿ ಮನೆಯ ತಡೆಗೋಡೆ ಕೆಡವಿದ್ದಾರೆ. ಸಾಯಂಕಾಲದವರೆಗೆ ಸಮಯ ನೀಡುವಂತೆ ಬೇಡಿಕೊಂಡರೂ ಕೇಳಲಿಲ್ಲ. ಹಾಗಾಗಿ ನಾವು ಆತ್ಮಹತ್ಯೆಗೆ ಯತ್ನಿಸಿದ್ದೇವೆ. ಊರಿನವರೆಲ್ಲರೂ ಬಂದು ನೋಡುತ್ತಾ ನಿಂತಿದ್ದರು. ಯಾರೂ ನಮಗೆ ಸಹಾಯ ಮಾಡಲಿಲ್ಲ. ಇದಕ್ಕೆಲ್ಲ ಡಿಸಿ ಗನ್ ಮ್ಯಾನ್ ಬಸವರಾಜ್ ಕಾರಣ" ಎಂದು ಆತ್ಮಹತ್ಯೆಗೆ ಯತ್ನಿಸಿದ ರಾಜೇಶ್ ಆರೋಪಿಸಿದ್ದಾರೆ.
ಒಂದೇ ಕುಟುಂಬದ ಮೂವರು ಸಾವು:ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೆಣ್ಣೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮೂವರು ಸಾವನ್ನಪ್ಪಿದ ದುರಂತ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆತ್ಮಹತ್ಯೆ ವೇಳೆ ಇಬ್ಬರು ಮಕ್ಕಳು, ಪತ್ನಿ ಸಾವನ್ನಪ್ಪಿದ್ದು ಪತಿಯ ಸ್ಥಿತಿ ಗಂಭೀರವಾಗಿತ್ತು. ಪತ್ನಿ ನೇತ್ರಾವತಿ ಮಕ್ಕಳಾದ ಹರ್ಷಿತ ಮತ್ತು ಸ್ನೇಹ ಮೃತಪಟ್ಟವರು ಎಂದು ಗುರುತಿಸಲಾಗಿತ್ತು. ಪತಿ ಸೊನ್ನೆಗೌಡನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.