ಹೊಸಪೇಟೆ : ನಗರದ ತಾಲೂಕು ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಹೊಸಪೇಟೆ ತಾಲೂಕು ಕಚೇರಿ ಮುಂದೆ ರೈತರ ಪ್ರತಿಭಟನೆ ಕೇಂದ್ರ ಮತ್ತು ರಾಜ್ಯ ಸರಕಾರವು ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಕೂಡಲೇ ಪರಿಹರಿಸಬೇಕೆಂದು ರೈತರು ಒತ್ತಾಯಿಸಿದರು.
ತಾಲೂಕಿನಲ್ಲಿ ತುಂಗಭದ್ರಾ ಜಲಾಶಯ ಇದ್ದರೂ ಸಹ ಹೊಸಪೇಟೆಯ ರೈತರು ನೀರಿಗಾಗಿ ಹೋರಾಟವನ್ನು ಮಾಡುವ ಸಂದರ್ಭ ಸೃಷ್ಟಿಯಾಗಿದೆ. ಸರಕಾರಕ್ಕೆ ಸುಮಾರು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಸಾಕಷ್ಟು ಬಾರಿ ಮನವಿಯನ್ನು ನೀಡಿದರು ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜವಾಗಿಲ್ಲ. ರೈತರ ಪರವಾಗಿದ್ದೇವೆ ಎಂದು ಎಲ್ಲಾ ಸರಕಾರಗಳು ಚುನಾವಣೆಯಲ್ಲಿ ಗೆಲ್ಲುವವರೆಗೂ ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ನಾವು ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ ಯಾವ ಸರಕಾರವೂ ಏತ ನೀರಾವರಿ ಯೋಜನೆ ಜಾರಿ ಮಾಡುತ್ತಿಲ್ಲವೆಂದು ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ತಾಲೂಕಿನ ಇಂಗಳಿಗಿ ವಡ್ಡರ ಹಳ್ಳಿ, ಪಿ.ಕೆ.ಹಳ್ಳಿ, ಬೈಲುವದ್ದುಗೇರಿ, ಕಾಕುಬಾಳು, ಧರ್ಮಸಾಗರ, ಗುಂಡ್ಲವದ್ದಿಗೇರಿ, ಜಿ.ಜಿ.ಕ್ಯಾಂಪ್, ಕೊಟಿಗನಾಳ್, ಗಾದಿಗನೂರು, ಭುವನಹಳ್ಳಿಯ ತನಕ ತೆಲಂಗಾಣ ಮಾದರಿ ಏತನೀರಾವರಿ ಯೋಜನೆಯನ್ನು ಕೂಡಲೇ ಜಾರಿ ಮಾಡಬೇಕು. ತಾಲೂಕಿನ ಎಲ್ಲಾ ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬೇಕು ಎಂದರು. ಕಬ್ಬಿನ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಾಶವಾದ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಿಕೊಡಬೇಕು. ರೈತರಿಗೆ ಸಾಲ ಮನ್ನಾದ ಶ್ವೇತಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು.