ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿರ್ಭಯಾ ಫಂಡ್ ಬಳಕೆಯಲ್ಲಿ ಅಧಿಕಾರಿ ವರ್ಗದ ಬೀದಿ ರಂಪಾಟಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಭಯಾ ಫಂಡ್ನ್ನು ಹನ್ನೆರಡು ಪ್ರಕರಣಗಳಲ್ಲಿ ಬಳಸಬೇಕು. ಆದ್ರೆ, ಇವರು ಬೆಂಗಳೂರು ಸಿಟಿಯನ್ನು ಸುರಕ್ಷೆ ಮಾಡಲಿಕ್ಕೆ ಸಿಸಿ ಟಿವಿ ಹಾಕ್ತಾರೆ, ಅದಕ್ಕೆ ಅಧಿಕಾರಿಗಳು ಯುನಿಫಾರ್ಮ್ ಹಾಕಿ ಬೀದಿ ರಂಪಾಟ ಮಾಡುತ್ತಿರೋದು ಸೋಜಿಗದ ಸಂಗತಿ ಎಂದು ನಿರ್ಭಯಾ ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ವಿವಾದ ಪ್ರಕರಣದ ಕುರಿತು ಉಗ್ರಪ್ಪ ಕಿಡಿಕಾರಿದ್ದಾರೆ.
ಯಾವುದೇ ಅಧಿಕಾರಿ ಸರ್ಕಾರದ ಅನುಮತಿ ಇಲ್ಲದೇ, ಈ ಯೋಜನೆ ಬಗ್ಗೆ ಮಾಧ್ಯಮದ ಮುಂದೆ ಹೇಳಬಾರದು. ಒಬ್ರು ಟ್ರಿನ್ ಟ್ರಿನ್ ಹಾಡು ಹೇಳ್ತಾರೆ. ಇನ್ನೊಬ್ರು ಯುನಿಫಾರ್ಮ್ ಹಾಕಿ ಮಾತಾಡ್ತಾರೆ. ಈ ಅಧಿಕಾರಿಗಳಿಗೆ ಜಸ್ಟೀಸ್ ವರ್ಮಾ ವರದಿ ಬಗ್ಗೆನೇ ಗೊತ್ತಿಲ್ಲ ಎಂದು ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಡಿ. ರೂಪಾ ವರ್ತನೆ ಕುರಿತು ಉಗ್ರಪ್ಪ ಛೇಡಿಸಿದ್ದಾರೆ.
ಈ ಅಧಿಕಾರಿಗಳು ಬೀದಿ ರಂಪಾಟ ಮಾಡಿದ್ರೂ, ರಾಜ್ಯ ಸರ್ಕಾರ ಸುಮ್ಮನಿರುತ್ತೆ. ಆ ಟೆಂಡರ್ನಲ್ಲಿಯೂ ಕಿಕ್ ಬ್ಯಾಕ್ ತಲುಪಿದೆಯಾ ನಿಮಗೆ? ಎಂದು ಪ್ರಶ್ನಿಸಿದ ಉಗ್ರಪ್ಪನವರು, ಇಷ್ಟೆಲ್ಲಾ ಆಗೋದಕ್ಕೆ ನೇರ ಹೊಣೆ ಮುಖ್ಯಮಂತ್ರಿಗಳೇ. ಕೇವಲ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ರೆ ಶಿಕ್ಷೆಯಾಗೋಲ್ಲ ಎಂದು ಹೇಳಿದ್ದಾರೆ.