ಬಳ್ಳಾರಿ:ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಜಿ ಶಾಸಕ ಅನಿಲ್ ಹೆಚ್.ಲಾಡ್ ಅವರು ಮನೆಯೊಂದನ್ನು ಬಾಡಿಗೆ ಪಡೆದಿದ್ದು, ಇಂದು ಅದರ ಗೃಹಪ್ರವೇಶ ನೆರವೇರಿಸಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಕೋನ ಇಟ್ಟುಕೊಂಡು ಶಾಸಕ ಲಾಡ್ ಅವರು ನಗರದ ಬಳ್ಳಾರಿ ಕ್ಲಬ್ನ ಹಿಂಭಾಗದ ವೀರನಗೌಡರ ಕಾಲೋನಿ ಯಲ್ಲಿರುವ ಮನೆಯ ಸಂಖ್ಯೆ 17 ರ ಮೊದಲನೇಯ ಮಹಡಿಯಲ್ಲಿರುವ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇದು ಅನಿಲ್ ಅವರು ತಾಯಿಯ ಮನೆಯಾಗಿದೆ ಎನ್ನಲಾಗುತ್ತಿದೆ.
2008ರಲ್ಲಿ ವೀರನಗೌಡ ಕಾಲೋನಿಯ ನಿವಾಸಿಯಾಗಿದ್ದ ಗುರುಮೂರ್ತಿ ಅವರಿಂದ ಒಂದೂವರೆ ಕೋಟಿ ರೂ.ಗೆ ಅನಿಲ್ ಲಾಡ್ ಸ್ವಂತ ಮನೆಯನ್ನು ಖರೀದಿಸಿದ್ದರು. ಆದರೆ ಚುನಾವಣೆ ವೇಳೆ ರೆಡ್ಡಿ ಮತ್ತು ಶ್ರೀರಾಮುಲು ತಂಡ ಬಂದು ಮನೆಗೆ ಬೆಂಕಿ ಹಚ್ಚಿ ಬೆದರಿಕೆ ಹಾಕಿದ್ದರು ಎಂದು ಲಾಡ್ ದೂರಿದ್ದರು.
ಹೀಗಾಗಿ ಆ ಮನೆಯನ್ನು ಮಾರಾಟ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಕೂಡ ನಗರದೆಲ್ಲೆಡೆ ಬಾಡಿಗೆ ಮನೆಗಾಗಿ ಹುಡುಕಾಡಿದರೂ ಯಾರು ಕೊಡಲಿಲ್ಲವಂತೆ. ಬಳಿಕ 2013ರ ಚುನಾವಣೆ ವೇಳೆಗೆ ವೆಂಕಟೇಶ್ವರ ನಗರದಲ್ಲಿ ಮನೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲಿ ನಡೆಯುತ್ತಿದ್ದ ಸಂಘರ್ಷದಿಂದ ಮಾಲೀಕರು ಮನೆ ಬಿಡಬೇಕು ಎಂದಿರುವ ಕಾರಣ ನಂತರ ಪಾರ್ವತಿ ನಗರದಲ್ಲಿ ಮನೆ ಮಾಡಿ, 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಸೋಲಿನ ನಂತರ ಆ ಮನೆಯನ್ನು ತೊರೆದಿದ್ದರು. ಕಳೆದ ಮಹಾನಗರ ಪಾಲಿಕೆ ಚುನಾವಣೆ ವೇಳೆ ಅವರು ಹೋಟೆಲ್ನಲ್ಲೇ ಉಳಿದುಕೊಂಡು ಪ್ರಚಾರದಲ್ಲಿ ತೊಡಗಿದ್ದರು.