ಬಳ್ಳಾರಿ : ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸಿದ್ಧತೆಗಳು ಆರಂಭವಾಗಿವೆ. ಅದರಲ್ಲಿಯೂ ವಿಧಾನಸಭೆಯಲ್ಲಿ ಸೋಲನ್ನು ಕಂಡಿರುವ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿ ರಾಜ್ಯ ರಾಜಕಾರಣದಲ್ಲಿ ತನ್ನ ಪ್ರಭಾವ ಕುಂದಿಲ್ಲ ಎಂದು ತೋರ್ಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಶ್ರೀರಾಮುಲು ಕೂಡಾ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಚುನಾವಣಾ ತಯಾರಿಯ ಗ್ರೌಂಡ್‌ವರ್ಕ್ ಮಾಡಲು ಆರಂಭಿಸಿರುವ ಮಾಜಿ ಸಚಿವ ಶ್ರೀರಾಮುಲು ತಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಸಾಧು ಸಂತರ ಭೇಟಿಗೆ ಮುಂದಾಗಿದ್ದಾರೆ.
ಈಗಾಗಲೇ ಹಲವು ಪುಣ್ಯ ಕ್ಷೇತ್ರಗಳ ದರ್ಶನ ಮಾಡಿರುವ ಮಾಜಿ ಸಚಿವರು, ಸಾಧು ಸಂತರ ಹಾಗೂ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನು ಮಾಜಿ ಸಚಿವ ಶ್ರೀರಾಮುಲು ಭೇಟಿ ಮಾಡಿ ಆಶೀರ್ವಾದ ಪಡೆದಿರೋದು ಕುತೂಹಲ ಮೂಡಿಸಿದೆ.
ಸಾಧುವಿನ ಆಶೀರ್ವಾದ ಪಡೆದ ಮಾಜಿ ಸಚಿವ ಶ್ರೀರಾಮುಲು ಬಿಜೆಪಿಯ ಪ್ರಮುಖ ಮುಖಂಡರಲ್ಲಿ ಒಬ್ಬರಾದ ಮಾಜಿ ಸಚಿವ ಶ್ರೀರಾಮುಲು, ಎಸ್ಟಿ ಸಮುದಾಯದ ಪ್ರಬಲ ನಾಯಕರಲ್ಲಿ ಒಬ್ಬರು. ಆದರೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ಕಂಡ ಸೋಲು ಅವರ ರಾಜಕೀಯ ಜೀವನಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಈ ಸೋಲಿನಿಂದ ಕಂಗೆಟ್ಟಿದ್ದ ಶ್ರೀರಾಮುಲು ಇದೀಗ ಲೋಕಸಭೆ ಚುನಾವಣೆಯ ತಯಾರಿಯ ಹಿನ್ನೆಲೆಯಲ್ಲಿ ನಾಗಸಾಧುಗಳ ಆಶೀರ್ವಾದ ಪಡೆಯುವ ಪ್ರಯತ್ನಕ್ಕೆ ಮುಂದಾಗುವ ಮೂಲಕ ಗೆಲುವಿನ ಹಳಿಗೆ ಮರಳಲು ಯತ್ನಿಸುತ್ತಿದ್ದಾರೆ.
ಈ ಸಾಧುವಿನ ಆಶೀರ್ವಾದ ಪಡೆದವರು ಯಾರೂ ಸೋತಿಲ್ಲ:ಸಂಡೂರು ತಾಲೂಕಿನ ದೇವರಕೊಳ್ಳ ಪ್ರದೇಶದಲ್ಲಿ ನೆಲೆಸಿರುವ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರು ಬಳ್ಳಾರಿ ಜಿಲ್ಲೆಯನ್ನು ಮೀರಿ ಪ್ರಭಾವನ್ನು ಹೊಂದಿದ್ದಾರೆ. ದಟ್ಟ ಅರಣ್ಯದಲ್ಲಿರುವ ಗುಡ್ಡದ ಮೇಲೆ ವಾಸ ಮಾಡುತ್ತಿರುವ ಈ ನಾಗಸಾಧು ಆರು ತಿಂಗಳು ಮಾತನಾಡಿದರೇ, ಇನ್ನಾರು ತಿಂಗಳು ಮೌನ ವ್ರತದಲ್ಲಿರುತ್ತಾರೆ.
ಇಲ್ಲಿಗೆ ಬಂದು ನಾಗಸಾಧುಗಳ ಆಶೀರ್ವಾದ ಪಡೆದವರು ಯಾರೂ ಕೂಡ ಸೋತಿಲ್ಲ ಎನ್ನುವ ಪ್ರತೀತಿ ಇದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸಾತ್ವಿಕ ಸನ್ಯಾಸಿ ಜೀವನ ನಡೆಸುತ್ತಿರುವ ಈ ನಾಗಸಾಧು ಆಶೀರ್ವಾದ ಪಡೆಯಲು ರಾಜಕೀಯ ಮುಖಂಡರು ಹೆಚ್ಚು ಹೆಚ್ಚು ಬರುತ್ತಿರುತ್ತಾರೆ. ಈ ಹಿಂದೆ ಡಿ ಕೆ ಶಿವಕುಮಾರ್, ಉಗ್ರಪ್ಪ, ತುಕಾರಾಂ, ಎಂ ಪಿ ಪ್ರಕಾಶ್, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಆನಂದ ಸಿಂಗ್, ಸಂತೋಷ ಲಾಡ್, ಅನಿಲ್ ಲಾಡ್ ಸೇರಿದಂತೆ ಹತ್ತು ಹಲವು ನಾಯಕರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ: ಚುನಾವಣಾ ರಾಜಕೀಯದಲ್ಲಿ ಬಹುತೇಕ ಯಶಸ್ಸನ್ನೇ ಕಂಡಿದ್ದ ಬಿ ಶ್ರೀರಾಮುಲು, 2023ರ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಅಲ್ಪ ಕಾಲ ಸೈಲೆಂಟ್ ಆಗಿದ್ದರು. ಅವರ ಮನೆಯಲ್ಲಿ ನಡೆದ ಶುಭ ಕಾರ್ಯಗಳ ಕಾರಣದಿಂದಲೂ ಕೂಡ ಅವರು ರಾಜಕೀಯ ಚಟುವಟಿಕೆಗಳಿಗೆ ಅಲ್ಪ ವಿರಾಮ ನೀಡಿದ್ದರು. ಬಿಡುವಿನ ಬಳಿಕ ಈಗ ಮತ್ತೊಮ್ಮೆ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮಾಜಿ ಸಚಿವರು ಸಿದ್ಧರಾಗುತ್ತಿದ್ದಾರೆ. ಬಳ್ಳಾರಿಯಿಂದ ಎಂಪಿ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿರುವ ಶ್ರೀರಾಮುಲು ಈ ಬಾರಿ ಗೆಲುವಿನ ರುಚಿ ನೋಡಲು ಸಕಲ ತಯಾರಿ ನಡೆಸುತ್ತಿದ್ದಾರೆ.
ರಾಜಕೀಯ ಆರಂಭದ ಮೊದಲ ವಿಧಾನಸಭೆ ಚುನಾವಣೆ 1999ರಲ್ಲಿ ಸೋತಿದ್ದು ಬಿಟ್ಟರೇ, ನಂತರ ನಿರಂತರವಾಗಿ ಗೆದ್ದ ಶ್ರೀರಾಮುಲು, 2023ರಲ್ಲಿ ಸೋತರು. 2004ರಿಂದ ಗೆಲುವಿನ ಅಭಿಯಾನ ಕಂಡಿದ್ದ ಶ್ರೀರಾಮುಲು, 2008, 2011ರ ಉಪ ಚುನಾವಣೆ 2013, 2018 ಸಾರ್ವತ್ರಿಕ ಚುನಾವಣೆ ಸೇರಿದಂತೆ 2014ರಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿಯೂ ಗೆದ್ದಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ 2023ರ ಚುನಾವಣೆಯಲ್ಲಿ ತವರು ಕ್ಷೇತ್ರ ಬಳ್ಳಾರಿ ಗ್ರಾಮಾಂತರದಿಂದ ಭಾರಿ ಅಂತರದ ಸೋಲಾಯ್ತು.
ಹೀಗಾಗಿ ಮತ್ತೊಮ್ಮೆ ರಾಜಕೀಯ ಅದೃಷ್ಟದ ಪರೀಕ್ಷೆ ಎದುರಿಸಲು ಸಿದ್ಧರಾಗಿರುವ ಶ್ರೀರಾಮುಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಕಾಣಲು ತಮ್ಮ ಪ್ರಯತ್ನಕ್ಕೆ ಅಲೌಕಿಕ ಆಧ್ಯಾತ್ಮದ ಬೆಂಬಲ ಪಡೆಯಲು ಹೊರಟಂತಿದೆ. ಕಳೆದ ಕೆಲವು ದಿನಗಳಿಂದ ಕ್ಷೇತ್ರದಲ್ಲಿನ ಅವರ ಓಡಾಟವನ್ನು ನೋಡಿದರೇ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಅಖಾಡದಲ್ಲಿ ತಮ್ಮ ಛಾಪನ್ನು ಮೂಡಿಸಲು ಶ್ರೀರಾಮುಲು ಸನ್ನದ್ಧರಾದಂತೆ ಕಾಣುತ್ತಿದೆ.
ಇದನ್ನೂ ಓದಿ:ಕಳ್ಳೆತ್ತುಗಳ ಜೊತೆ ನಮ್ಮ ಜೋಡೆತ್ತುಗಳ ಒಳ್ಳೆಯದಾಗಿ ಕೆಲಸ ಮಾಡಲಿವೆ: ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ