ಬಳ್ಳಾರಿ:ಗಣಿನಾಡಿನಲ್ಲಿ ಮಾಜಿ ಸಚಿವ ಸಂತೋಷ ಎಸ್.ಲಾಡ್ (ದಾದಾ) ಹೆಸರಿನಡಿ ಉಚಿತ ಊಟ ನೀಡುವ ಕ್ಯಾಂಟೀನ್ಗಳು ಶುರುವಾಗಿವೆ. ಇಂದು ನಗರದ ತಹಶೀಲ್ದಾರ್ ಕಚೇರಿಯ ಆವರಣ ಹಾಗೂ ವಿಮ್ಸ್ ಆಸ್ಪತ್ರೆಯ ಆವರಣದ ಮುಂಭಾಗದಲ್ಲಿ ಸ್ಥಾಪನೆಗೊಂಡಿರುವ ಲಾಡ್ ಕ್ಯಾಂಟೀನ್ಗಳಿಗೆ ಮಾಜಿ ಸಚಿವ ಸಂತೋಷ್ ಎಸ್.ಲಾಡ್ ಅವರು ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಲೋಕಾರ್ಪಣೆ ಮಾಡಿದರು. ಇವರು ನಿತ್ಯ 2,500 ಮಂದಿಗೆ ಉಚಿತ ಊಟ ಕೊಡುವ ಉದ್ದೇಶ ಹೊಂದಿವೆ.
ಯಾವ ರಾಜಕೀಯ ಉದ್ದೇಶವಿಲ್ಲ:
ಬಳಿಕ ಮಾಧ್ಯಮಗಳೊಂದಿಗೆ ಸಂತೋಷ್ ಲಾಡ್ ಮಾತನಾಡಿ, ಹಸಿದವರಿಗೆ ಅನ್ನ ನೀಡುವ ಬಗ್ಗೆ ಆಲೋಚಿಸಿ ಕ್ಯಾಂಟೀನ್ಗಳ ಪ್ರಾರಂಭಕ್ಕೆ ನಿರ್ಧರಿಸಿದೆ. ಕೂಡ್ಲಿಗಿ ಪಟ್ಟಣದಲ್ಲಿ ಎರಡು ಕಡೆ, ಹರಪನಹಳ್ಳಿಯಲ್ಲಿ ಎರಡು ಕಡೆ ಈಗಾಗಲೇ ಕ್ಯಾಂಟೀನ್ಗಳನ್ನು ಪ್ರಾರಂಭಿಸಲಾಗಿದೆ. ನಾನು ಪ್ರತಿ ನಿಧಿಸುವ ಕಲಘಟಗಿ ಕ್ಷೇತ್ರದಲ್ಲಿ ಈ ಕ್ಯಾಂಟೀನ್ ಶುರು ಮಾಡಿದ್ದೇನೆ.
ಜನರ ಒತ್ತಾಸೆಯಂತೆ ಅಳ್ಳಾವರದಲ್ಲೂ ಕ್ಯಾಂಟೀನ್ ಆರಂಭಿಸಲಾಗಿದೆ. ಇದೀಗ ಬಳ್ಳಾರಿಯಲ್ಲಿ ಎರಡು ಕಡೆ ಆರಂಭಿಸಿದ್ದೇವೆ. ಕ್ಯಾಂಟೀನ್ ಆರಂಭದ ಹಿಂದೆ ಯಾವ ರಾಜಕೀಯ ಉದ್ದೇಶವಿಲ್ಲ. ಎಲ್ಲ ಕಡೆ ನಾನು ಚುನಾವಣೆ ನಿಲ್ಲಲೂ ಸಹ ಬರಲ್ಲ. ಹಸಿದವರಿಗೆ ಅನ್ನ ಸಿಗಬೇಕು ಎಂಬ ಆಶಯದಲ್ಲಿ ಕ್ಯಾಂಟೀನ್ ಶುರು ಮಾಡಿದ್ದೇನೆ ಎನ್ನುತ್ತಾರೆ ಸಂತೋಷ ಲಾಡ್.
ನಿತ್ಯ ಮಧ್ಯಾಹ್ನ 12ರಿಂದ ಊಟ ಶುರು:
ದಿನ ಮಧ್ಯಾಹ್ನ 12 ಗಂಟೆಯಿಂದ ಇಲ್ಲಿ ಊಟ ಲಭಿಸಲಿದೆ. ಚಿತ್ರಾನ್ನ, ಪಲಾವ್, ಮೊಸರನ್ನ, ಬಿಸಿ ಬೇಳೆ ಬಾತ್, ಪುಳಿಯೋಗರೆ, ಟೋಮೆಟೋ ಬಾತ್, ರೈಸ್ ಬಾತ್, ಘೀ ರೈಸ್, ಜೀರಾ ರೈಸ್ ಸೇರಿದಂತೆ ನಾನಾ ರೀತಿಯ ಆಹಾರವನ್ನು ತಯಾರಿಸಿ ನೀಡಲಾಗುತ್ತದೆ. ಗ್ರಾಮೀಣ ಭಾಗದಿಂದ ಬರುವ ರೈತರು, ಸಣ್ಣಪುಟ್ಟ ವ್ಯಾಪಾರಿಗಳು, ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ ಎಂದರು.
ಈ ವೇಳೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಯುವ ಮುಖಂಡ ಬಿ.ಎಂ.ಪಾಟೀಲ್, ಕೊಳಗಲ್ ಅಂಜಿನಿ, ವಿಲ್ಸನ್ ಕಾಂತಿ ನೊವೆಲ್ಸ್, ಮಾಜಿ ಮೇಯರ್ ವೆಂಕಟರಮಣ ಮೊದಲಾದವರು ಇದ್ದರು.