ಬಳ್ಳಾರಿ:ಮುಂದಿನ ದಿನಗಳಲ್ಲಿ ನಾನು ಮಂತ್ರಿ ಆಗಬೇಕು, ಸಿಎಂ ಆಗಬೇಕೆಂಬ ಆಸೆಯಿಲ್ಲ. ಆದರೆ ಮನಸ್ಸು ಮಾಡಿದರೆ ಖಂಡಿತವಾಗಿ ನಾನು ಸಿಎಂ ಆಗಿಯೇ ಆಗುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಬಳ್ಳಾರಿ ನಗರದ ಹೊರ ವಲಯದಲ್ಲಿರುವ ಕ್ಲಾಸಿಕ್ ಫಂಕ್ಷನ್ ಹಾಲ್ನಲ್ಲಿ ಸಂಜೆ ಆಯೋಜಿಸಲಾಗಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಅಣ್ಣ ಕರುಣಾಕರ ರೆಡ್ಡಿ ಬಳ್ಳಾರಿ ಸಾಮಾನ್ಯ ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದರು. ಸೋಮಶೇಖರರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷ ಆಗಿ ಕೆಲಸ ಮಾಡಿದರು. ನನಗೆ ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಅಂತಹ ವಿಶೇಷ ಆಶೀರ್ವಾದ ಶ್ರೀ ಕನಕದುರ್ಗಮ್ಮ ದೇವಿ ನನಗೆ ನೀಡಿದ್ದಾಳೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ. ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ ಎಂದು ನನ್ನ ಬಂಧನಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳೇ ಖುದ್ದು ಹೇಳಿದರು. ಆದರೆ, ಬಳ್ಳಾರಿಯ ಪ್ರತಿ ಸಾಮಾನ್ಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಹೇಳಿದ್ದರು ಎಂದು ಹಳೆಯ ವಿಚಾರಗಳನ್ನು ಮೆಲಕು ಹಾಕಿದರು.