ಬಳ್ಳಾರಿ :ನಮ್ಮ ಸಮಾಜಕ್ಕೆ ಧಕ್ಕೆಯಾದರೆ ಏನಾಗುತ್ತೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ತಕ್ಕ ಉತ್ತರ ಕೊಟ್ಟಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿಂದು ನಡೆದ ಬಣಜಿಗ ಸಮಾವೇಶಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಜಗದೀಶ್ ಶೆಟ್ಟರ್ ಮಾತನಾಡಿದರು.
ಬಣಜಿಗ ಸಮುದಾಯ ಒಂದು ಸ್ವಾಭಿಮಾನದ ಸಮಾಜ. ನಮ್ಮ ಸಮಾಜಕ್ಕೆ ಧಕ್ಕೆಯಾದ್ರೆ ಏನಾಗುತ್ತೆ ಎಂದು ಎಲ್ಲರಿಗೂ ಗೊತ್ತಾಗಿದೆ. ಅನ್ಯಾಯ ಮಾಡಿದವರಿಗೆ ಸಮುದಾಯ ಹೇಗೆ ಉತ್ತರ ಕೊಟ್ಟಿದೆ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ. ಅವರೀಗ ಎಲ್ಲಿ ಬೇಕೋ ಅಲ್ಲಿ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಜಗದೀಶ್ ಶೆಟ್ಟರ್ ಜೊತೆ ಇಡೀ ಸಮಾಜ ಇದೆ ಎಂದು ಸಂದೇಶ ಕೊಟ್ಟಿದ್ದೀರಿ ಎಂದರು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸ್ವಲ್ಪ ಸಮಸ್ಯೆ ಇದೆ. ಆ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೇವೆ. ನಮ್ಮ ಸಮಾಜ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ. ಲಿಂಗಾಯತ ಎಲ್ಲ ಉಪ ಪಂಗಡಗಳ ಗುರಿ ನಾವೆಲ್ಲ ಲಿಂಗಾಯತರು ಒಂದು ಎನ್ನುವುದಾಗಿರಬೇಕು.
2 ಎ ಬಗ್ಗೆ ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಗೊಂದಲ ನಿವಾರಿಸಿದ್ದೆ. ಇನ್ನು ಮುಂದೆ ಸಮಾಜ ಬಾಂಧವರು ವಿದ್ಯಾರ್ಜನೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.