ಬಳ್ಳಾರಿ:ರಾಜ್ಯ ಸರ್ಕಾರ ಸ್ಥಾಪಿಸಿರುವ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ವಿರೋಧ ವ್ಯಕ್ತಪಡಿಸುತ್ತ, ಅದನ್ನು ಗೊಲ್ಲರ ಅಭಿವೃದ್ಧಿ ನಿಗಮ ಎಂದು ಮರು ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾ ಗೊಲ್ಲರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾತನಾಡಿದ ಜಿಲ್ಲಾ ಗೊಲ್ಲರ ಸಂಘದ ಕಾರ್ಯದರ್ಶಿ ಕೆ.ಇ ಚಿದಾನಂದಪ್ಪ, ರಾಜ್ಯದಲ್ಲಿ ವಿಶ್ವಕರ್ಮ, ಉಪ್ಪಾರ ಗಂಗಾಮತ, ಒಕ್ಕಲಿಗ, ವೀರಶೈವ ಸೇರಿದಂತೆ ನಮ್ಮೆಲ್ಲಾ ಹಲವಾರು ಉಪಜಾತಿಗಳಾದ ಕಾಡುಗೊಲ್ಲ, ಕೃಷ್ಣಗೊಲ್ಲ, ಹರಿವಿಗೊಲ್ಲ, ಹಾವುಗೊಲ್ಲ ಮೊದಲಾದ ಹೆಸರುಗಳಿದ್ದರೂ ಒಟ್ಟಾರೆಯಾಗಿ ಯಾದವ ಸಮೂಹ ಎಂದು ಕರೆಯಲಾಗುತ್ತದೆ. ನಮ್ಮಲ್ಲಿನ ಎಲ್ಲಾ ಉಪಜಾತಿಗಳನ್ನು ನಿರ್ಲಕ್ಷ್ಯ ಮಾಡಿ ಕೇವಲ ಕಾಡುಗೊಲ್ಲ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ನೋವನ್ನುಂಟು ಮಾಡಿದೆ ಎಂದು ತಿಳಿಸಿದರು.