ವಿಜಯನಗರ:ಮುಂಬರುವ ವಿಧಾನಸಭಾ ಚುನಾವಣೆಗೆ ಈ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಇಂದು ಶಾಸಕ ಭೀಮ ನಾಯ್ಕ ಏರ್ಪಡಿಸಿರುವ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಗರಿಬೊಮ್ಮನಹಳ್ಳಿ ಹೊರವಲಯದ ಹೆಲಿಪ್ಯಾಡ್ಗೆ ಸಿದ್ದರಾಮಯ್ಯ ಬಂದಿಳಿದರು. ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯಾದ್ಯಂತ ಕಾಂಗ್ರೆಸ್ ನ ಶಕ್ತಿ ಹೆಚ್ಚಿದೆ, ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಹಾಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಯಾರೇ ಹೊಸ ಪಕ್ಷ ಸ್ಥಾಪಿಸಲಿ ಅಥವಾ ಇನ್ನೇನಾದರೂ ಅವರು ಹೇಳಿಕೊಳ್ಳಲಿ. ಸ್ವಂತ ಬಲದ ಮೇಲೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಇದನ್ನೂ ಓದಿ:ಸಂಕ್ರಾಂತಿಯೊಳಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ: ಡಿಕೆಶಿ
ಈ ಹಿಂದೆ ಎಸ್. ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು ಸೇರಿದಂತೆ ಹಲವರು ಪಕ್ಷ ಕಟ್ಟಿದ್ದರು. ಏನಾಗಿದೆ ಎನ್ನುವುದು ಎಲ್ಲರಿಗೂ ಅದರ ಇತಿಹಾಸ ಗೊತ್ತಿದೆ. ಹಾಗಂತ ನಾನು ಅವರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದೇನೆ ಎಂದರ್ಥವಲ್ಲ. ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ಮತದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.