ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮುದೇನೂರು ಗ್ರಾಮದ ಶನೀಶ್ವರ ದೇವಸ್ಥಾನ ಮುಳುಗಡೆ ಆಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ 8 ಜನರನ್ನು ರಕ್ಷಿಸಲು ಹೋದ ಅಗ್ನಿಶಾಮಕ ದಳ ಸಿಬ್ಬಂದಿಯ ಬೋಟ್ ಮಗುಚಿ ಬಿದ್ದಿರುವ ಘಟನೆ ನಡೆದಿದೆ. ವೇದಾವತಿ ನದಿಯ ಬಳಿ ಈ ದೇವಸ್ಥಾನವಿದ್ದು, ದೇವಸ್ಥಾನದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದರು. ಈ ವೇಳೆ ಬೋಟ್ ಪಲ್ಟಿಯಾಗಿದೆ. ಬೋಟ್ ಪಲ್ಟಿಯಾದರೂ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿ ದೇವಸ್ಥಾನ ಬಳಿ ಸೇರಿದ್ದಾರೆ.
ಬೆಳಗ್ಗೆ ದೇವಸ್ಥಾನಕ್ಕೆ ಪೂಜಾರಿ ಹಾಗೂ ಭಕ್ತರು ಪೂಜೆಗೆ ತೆರಳಿದ್ದರು. ಕ್ಷಣಕ್ಷಣಕ್ಕೂ ವೇದಾವತಿ ನದಿಯ ನೀರು ಹೆಚ್ಚಾಗುತ್ತಿದೆ. ನೀರಿನ ಸೆಳೆತ ಹೆಚ್ಚಳ ಹಿನ್ನೆಲೆಯಲ್ಲಿ ಬೋಟ್ ಮೂಲಕ ರಕ್ಷಣೆ ಕಷ್ಟ ಎಂದು ಹೇಳಲಾಗುತ್ತಿದೆ. 2009ರಲ್ಲಿ ಇದೇ ರೀತಿ ದೇವಸ್ಥಾನದಲ್ಲಿ ಪ್ರವಾಹದಲ್ಲಿ ಜನ ಸಿಲುಕಿಕೊಂಡಿದ್ದರು. ಆಗ ಏರ್ ಲಿಫ್ಟ್ ಮೂಲಕ ಜನರನ್ನು ರಕ್ಷಣೆ ಮಾಡಲಾಗಿತ್ತು.
ಜನರ ಪರದಾಟ:ಕಳೆದ ಮೂರು ದಿನಗಳಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸತತ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲೆಲ್ಲೂ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಜನರು ಪರದಾಡುತ್ತಿದ್ದಾರೆ. ರೈತರ ಜಮೀನಲ್ಲಿ ಮಳೆ ನೀರು ಹರಿದು ಅಪಾರ ಪ್ರಮಾಣದ ಹಾನಿಯಾಗಿದೆ. ವೇದಾವತಿ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಕಂಪ್ಲಿ ವಿಧಾನಸಭಾ ಕ್ಷೇತ್ರದ ಹಾಗೂ ಬಳ್ಳಾರಿ ತಾಲೂಕು ವ್ಯಾಪ್ತಿಯ ಬಸರಕೋಡು ಗ್ರಾಮದಲ್ಲಿ 48 ಮನೆಗಳು ಜಲಾವೃತಗೊಂಡಿವೆ.
ಬಸರಕೋಡು ಗ್ರಾಮದಲ್ಲಿಯೂ ಕೂಡ ಎರಡು ಮೂರು ದಿನಗಳಿಂದ ಮಳೆ ಆಗುತ್ತಿದೆ. ವೇದಾವತಿ ನದಿಯಲ್ಲೂ ಹರಿವು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನಿನ್ನೆ ಗ್ರಾಮ ಲೆಕ್ಕಿಗರು ಬಂದು ಎಚ್ಚರಿಕೆ ಸಂದೇಶ ನೀಡಿ ಹೋಗಿದ್ದರಷ್ಟೇ. ಮನೆಗಳು ಜಲಾವೃತ ಆದರೂ ಕೂಡ ಕಾಳಜಿ ಕೇಂದ್ರ ಆರಂಭವಾಗಿಲ್ಲ, ಮಂಗಳವಾರ ರಾತ್ರಿಯಿಂದಲೇ ನದಿಯಲ್ಲಿ ನೀರು ಏರಲು ಶುರು ಆಗಿದೆ. ಬುಧವಾರ ಮತ್ತೆ ನೀರು ಏರಿಕೆ ಆಗಿದೆ. ಈವರೆಗೆ ಯಾವ ಅಧಿಕಾರಿಗಳು ಕೂಡ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.