ಬಳ್ಳಾರಿ: ತಾಲೂಕಿನ ಕೊಳಗಲ್ ಗ್ರಾಮದ ಬಳಿಯ ಎಚ್‌ಎಲ್‌ಸಿ ಕಾಲುವೆಗೆ ಆಟೋ ಪಲ್ಟಿಯಾಗಿ ಆರು ಜನ ಕೃಷಿ ಕಾರ್ಮಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಇದರಿಂದ ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಎಲ್ಲ ಮೃತದೇಹಗಳು ಸಿಕ್ಕಂತಾಗಿದೆ.
ಗುರುವಾರ ಸಂಜೆ ನಾಗರತ್ನಮ್ಮ ಅವರ ಮೃತದೇಹವು ಬಳ್ಳಾರಿ ಸಮೀಪದ ಬಂಡಿಹಟ್ಟಿಯಲ್ಲಿ ಸಿಕ್ಕಿದ್ದರೆ, ಶುಕ್ರವಾರ ಬೆಳಗ್ಗೆ ಆಂಧ್ರಪ್ರದೇಶದ ಉಂತಕಲ್ ಸಮೀಪ ಮಲ್ಲಮ್ಮ(30) ಮೃತದೇಹ ಸಿಕ್ಕಿತ್ತು. ಶುಕ್ರವಾರ ಸಂಜೆ ಹುಲಿಗೆಮ್ಮ ಅವರ ದೇಹವು ಸಿಗುವ ಮೂಲಕ ನಾಪತ್ತೆಯಾದ ಮೂರು ದೇಹ ಸಿಕ್ಕಂತಾಗಿದೆ.
ಘಟನೆಯಲ್ಲಿ ಆರು ಜನರ ಸಾವಿಗೀಡಾಗಿದ್ದರು. ಮೂವರು ದೇಹಗಳು ಪತ್ತೆಯಾಗಿದ್ದು, ಇನ್ನುಳಿದ ಮೃತದೇಹಗಳಿಗೆ ಕಳೆದ ಎರಡು ದಿನಗಳಿಂದ ಮೃತರ ಸಂಬಂಧಿಗಳು ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಮಲ್ಲಮ್ಮ ಮತ್ತು ಹುಲಿಗೆಮ್ಮ ಅವರ ಮೃತ ದೇಹಗಳನ್ನು ವಿಮ್ಸ್ನಲ್ಲಿ ಶವ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಕೊಳಗಲ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಳ್ಳಾರಿ ತಾಲೂಕಿನ ಕೊಳಗಲ್ ಸಮೀಪದಲ್ಲಿ ನಡೆದ ಘಟನೆಯಲ್ಲಿ ಐದು ಜನರು ರಕ್ಷಣೆಯಾಗಿದ್ದರು, ಮೂವರು ಮೃತ ದೇಹಗಳು ಘಟನಾ ಸ್ಥಳದಲ್ಲಿ ಸಿಕ್ಕಿದ್ದರೆ, ಇನ್ನುಳಿದ ಮೂರು ದೇಹಗಳು ನೀರಿನಲ್ಲಿ ನಾಪತ್ತೆಯಾಗಿದ್ದವು. ಈಗ ಎಲ್ಲ ಮೃತದೇಹಗಳು ಪತ್ತೆಯಾಗಿದ್ದು, ಮುಂದಿನ ಕ್ರಮ ಅನುಸರಿಸಲಾಗಿದೆ. ಈ ದುರಂತ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ:ಎಚ್‌ಎಲ್‌ಸಿ ಕಾಲುವೆಗೆ ಉರುಳಿದ ಆಟೋ: ಮತ್ತೆರಡು ಮೃತದೇಹ ಮತ್ತೆ, ಸಾವಿನ ಸಂಖ್ಯೆ 5ಕ್ಕೇರಿಕೆ