ವಿಜಯನಗರ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪದ ಮೇಲೆ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಹೂವಿನಹಡಗಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ. 8ರಂದು ಶಾಸಕರು ಅನುಮತಿ ಪಡೆಯದೆ ಅವರ ನಿವಾಸದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮತಯಾಚಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮನೆಯ ಮುಂದೆ ನಿಂತಿದ್ದ ಮಿನಿ ಲಾರಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಲೇಬಲ್ ಅಂಟಿಸಿದ್ದ ನೀರಿನ ಬಾಟಲಿಗಳನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. 77200 ಮೊತ್ತದ 720 ಅರ್ಧ ಲೀಟರ್ ನೀರಿನ ಬಾಟಲಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಮಿನಿ ಲಾರಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯಲಗೂರು ಕ್ರಾಸ್ ಚೆಕ್‌ಪೋಸ್ಟ್ ಬಳಿ 9.95 ಲಕ್ಷ ನಗದು ವಶ: ಮತ್ತೊಂದೆಡೆ, ದಾಖಲೆ ಇಲ್ಲದೆ ಕೆಎಸ್ಆರ್ಟಿಸಿ ಬಸ್‌ನಲ್ಲಿ ವ್ಯಕ್ತಿಯೊಬ್ಬ ಸಾಗಿಸುತ್ತಿದ್ದ 9.95 ಲಕ್ಷ ರೂ ನಗದನ್ನು ವಿಜಯಪುರ ಜಿಲ್ಲೆಯ ಯಲಗೂರು ಕ್ರಾಸ್ ಚೆಕ್‌ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನೂರ್‌ಖಾನ್ ಧಪೇದಾರ್ ಎಂಬಾತನ ಬಳಿ ಹಣ ಪತ್ತೆಯಾಗಿದೆ. ಕೂಡಗಿ ನಿವಾಸಿಯಾಗಿರು ನೂರ್‌ಖಾನ್ ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಚೆಕ್ ಪೋಸ್ಟ್ ಪೊಲೀಸರಿಗೆ ಬಂದ ಮಾಹಿತಿ ಆಧರಿಸಿ ಬಸ್ ನಿಲ್ಲಿಸಿ ತಪಾಸಣೆ ನಡೆಸಿದಾಗ ನೂರುಖಾನ ಬಳಿ ದಾಖಲೆ ಇಲ್ಲದ ನಗದು ಪತ್ತೆಯಾಗಿದೆ.
ನೂರ್‌ಖಾನ್ ಇದು ಈರುಳ್ಳಿ ಮಾರಾಟದಿಂದ ಬಂದ ಹಣ ಎಂದು ಪೊಲೀಸರಿಗೆ ಸಮಜಾಯಿಷಿ ನೀಡಿದ್ದರೂ ಸಹ ಅದಕ್ಕೆ ಯಾವುದೇ ದಾಖಲೆ ಇರಲಿಲ್ಲ. ಈ ವೇಳೆ ನಿಡಗುಂದಿ ತಹಶೀಲ್ದಾರ್ ಕಿರಣ ಕುಮಾರ್ ಕುಲಕರ್ಣಿ ದಾಖಲೆ ನೀಡಿ ಹಣ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ 10 ಲಕ್ಷ ನಗದು ವಶ: ದಾಖಲೆ ಇಲ್ಲದೆ 10 ಲಕ್ಷ ರೂ. ಸಾಗಿಸುತ್ತಿದ್ದ ಎಟಿಎಂ ವಾಹನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ, ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಎಟಿಎಂ ವಾಹನದಲ್ಲಿ ಸಮರ್ಪಕ ದಾಖಲೆಗಳಿಲ್ಲದೆ ಅವಧಿ ಮೀರಿ 10 ಲಕ್ಷ ರೂ. ಮೊತ್ತವನ್ನು ರಾತ್ರಿ 10 ಗಂಟೆ ಸುಮಾರಿಗೆ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:₹100 ಕೋಟಿ ಗಡಿ ದಾಟಿದ ಅಕ್ರಮ ನಗದು, ಮದ್ಯ, ವಸ್ತುಗಳ ಜಪ್ತಿ ಮೌಲ್ಯ