ಬಳ್ಳಾರಿ :ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ಅಂಜೂರದ ಬಾರ್-ಜಾಮ್ ತಯಾರಿಕೆ ಘಟಕ ಶುರುವಾಗಿದೆ. ಈ ಘಟಕದಲ್ಲಿ ನಾಲ್ಕಾರು ಗುಂಪುಗಳುಳ್ಳ ಮಹಿಳೆಯರು ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಅಂಜೂರ ಹಣ್ಣುಗಳನ್ನ ದೂರದ ಮಹಾನಗರಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗಿಡಗಳಲ್ಲೇ ಅಂಜೂರದ ಹಣ್ಣುಗಳು ಕೊಳೆತು ಹೋಗುತ್ತಿದ್ದವು. ಆಗ ಏನು ಮಾಡಬೇಕು ಎಂದು ತೋಚದ ಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಾರರಿದ್ದರು. ಅವರ ನೆರವಿಗೆ ಬಂದಿದ್ದು ಬಳ್ಳಾರಿ ತಾಲೂಕಿನ ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಿಲ್ಪಾರವರು.
ಅಂಜೂರ ಹಣ್ಣು ಕೊಳೆತು ರಸ್ತೆಯ ಪಾಲು ಆಗೋದನ್ನ ತಡೆದು ಈ ಘಟಕ ಆರಂಭಿಸುವ ಕುರಿತು ಸೂಕ್ತ ತರಬೇತಿ ನೀಡಿದರು. ಅಂಜೂರದ ಹಣ್ಣುಗಳನ್ನ ಕರಗಿಸಿ ಬಾರ್-ಜಾಮ್ ತಯಾರಿಕೆ ಮಾಡಲಾಗುತ್ತಿದ್ದು, ಇದಕ್ಕೆ ಭಾರೀ ಬೇಡಿಕೆ ಬಂದಿದೆ.
ಬಳ್ಳಾರಿ ರೆಡ್ ತಳಿ ಅತ್ಯಾಕರ್ಷಕ :ಜಿಲ್ಲೆಯಲ್ಲಿ ಬೆಳೆಯುವ ಅಂಜೂರದ ತಳಿಗೆ ಬಳ್ಳಾರಿ ರೆಡ್ ಎಂತಲೇ ಹೆಸರು. ಇತರೆ ತಳಿಗಳಾದ ಡಯಾನ, ಟರ್ಕಿ ಬ್ರೌನ್‍ಗಳನ್ನು ಹೆಚ್ಚಾಗಿ ಕುರುಗೋಡು ಹೋಬಳಿಯಲ್ಲಿ ರೈತರು ಬೆಳೆದರು ಕೂಡ, ಬಳ್ಳಾರಿ ರೆಡ್ ತಳಿಯದ್ದೇ ಸಿಂಹಪಾಲು. ಈ ತಳಿಯ ಅಂಜೂರವು ಜಿಲ್ಲೆಯಲ್ಲೇ ಸರಿ ಸುಮಾರು 1800 ಹೆಕ್ಟೇರ್‌ನಷ್ಟು ಪ್ರದೇಶನ್ನಾವರಿಸಿದೆ.
ಕೊರೊನಾ ಎಫೆಕ್ಟ್‌ನಿಂದ ಕಂಗಾಲಾಗಿದ್ದ ರೈತರು :ಕೊರೊನಾ ಎಫೆಕ್ಟ್‌ನಿಂದಾಗಿ ರೈತರು ಬೆಳೆದ ಅಂಜೂರ ಬೆಳೆಗೆ ಸೂಕ್ತ ಸಾಗಾಣಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಸಿಗದೇ ಕಂಗಾಲಾಗಿದ್ದರು. ಮೊದಲ ಲೌಕ್‌ಡೌನ್ ಘೋಷಣೆಯಾದಾಗ ಅನೇಕ ಅಂಜೂರ ಬೆಳೆಗಾರರಿಗೆ ಹಣ್ಣು ಕೀಳಲು ಕೊಡುವ ಕೂಲಿಯಷ್ಟೂ ಲಾಭ ಬರದೇ ಗಿಡದಲ್ಲೇ ಕೊಳೆಸುವಂತಹ ಪರಿಸ್ಥಿತಿ ಎದುರಾಗಿತ್ತು.
ಅಂಜೂರ ಮೌಲ್ಯವರ್ಧನೆ ತರಬೇತಿ : ರಾಯಚೂರು ಆಹಾರ ಮತ್ತು ತಂತ್ರಜ್ಞಾನ ವಿಭಾಗವು ಅಂಜೂರದ ಮೌಲ್ಯವರ್ಧನೆ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ್ದು, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹಗರಿ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಹೆಚ್ ಶಿಲ್ಪಾ ಅವರು, ಜಿಲ್ಲೆಯ ಕುರುಗೋಡು ಹೋಬಳಿಯ ಉತ್ಸಾಹಿ ಮಹಿಳೆಯರ ಗುಂಪುಗಳಿಗೆ ಅಂಜೂರದ ಬಾರ್ ಮತ್ತು ಜಾಮ್ ತಯಾರಿಕೆ ತರಬೇತಿ ನೀಡಿದರು.
ಆ ಮೂಲಕ ಮಹಿಳೆಯರ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾದರು. ಈ ಅಂಜೂರ ಮೌಲ್ಯವರ್ಧನೆ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನ ನೀಡಿದರು. ಈ ತರಬೇತಿ ಪಡೆದ ಸುಧಾ, ಪೂಜಾ ಹಾಗೂ ಇತರೆ ಮಹಿಳೆಯರ ಗುಂಪುಗಳು ಅಂಜೂರ ಬಾರ್- ಜಾಮ್ ತಯಾರಿಕೆಗೆ ಮುಂದಾದರು.
ಈಟಿವಿ ಭಾರತದೊಂದಿಗೆ ಗೃಹ ವಿಜ್ಞಾನಿ ಡಾ.ಹೆಚ್.ಶಿಲ್ಪಾ ಅವರು ಮಾತನಾಡಿ, ಅಂಜೂರ ಹಣ್ಣುಗಳ ಜೊತೆಗೆ ಮೌಲ್ಯವರ್ಧಿತ ಪದಾರ್ಥಗಳನ್ನು ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರು ಮಾರುಕಟ್ಟೆಗೂ ಕೂಡ ಕಳುಹಿಸಲು ಆರಂಭಿಸಿದ್ದಾರೆ. ಅಲ್ಲಿ ಹೆಚ್ಚಿದ ಬೇಡಿಕೆಯನ್ನು ಅರಿತು ಮಹಿಳೆಯರು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಂಜೂರದ ಬಾರ್ ತಯಾರಿಸಲು ಬೇಕಾದ ಟ್ರೇ ಡ್ರೈಯರ್‌ಗಳನ್ನ ಖರೀದಿಸಿದ್ದಾರೆ.
ಇತರ ಪ್ರಗತಿ ಪರ ರೈತರು ಸೋಲಾರ್ ಟನಲ್ ಡ್ರೈಯರ್‌ಗಳನ್ನ ಬಳಸಿ ಅಂಜೂರ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ಪ್ರತಿ ಕೆಜಿ ಅಂಜೂರದ ಬಾರ್ ತಯಾರಿಸಲು ಹಣ್ಣು, ಕಚ್ಚಾ ವಸ್ತುಗಳು, ಕೂಲಿ ಹಾಗೂ ಇಂಧನಕ್ಕೆ ತಗಲುವ ವೆಚ್ಚ ₹100 ಇವರುಗಳು ಪ್ರತಿ ಕೆಜಿಗೆ ₹220 ಗೆ ಮಾರುತ್ತಾರೆ ಎಂದರು.
ಸದ್ಯ ಕುರುಗೋಡಿನ ಶ್ರೀನಿವಾಸ ಕ್ಯಾಂಪ್ ಒಂದರಲ್ಲೇ ಲಕ್ಷ್ಮಿ ಸಾಯಿ ನೇಚರ್ಸ್ ಪ್ರೊಡಕ್ಟ್ ಹೊರತುಪಡಿಸಿ ರಮೇಶಬಾಬು (ವಾಸವಿ ಫಾರ್ಮ್), ಲಕ್ಷ್ಮಿರವರ ಗುಂಪು (ಆಂಜಿನೇಯ ಮೌಲ್ಯವರ್ಧನೆ ಘಟಕ), ವಾಣಿ ಪುಷ್ಪಾರವರ ಗುಂಪು (ಜಯಶ್ರೀ ಮೌಲ್ಯವರ್ಧನೆ ಘಟಕ) ಇವರುಗಳು ಅಂಜೂರದ ಮೌಲ್ಯವರ್ಧನೆ ಮಾಡುವುದರಲ್ಲಿ ಸಕ್ರಿಯರಾಗಿದ್ದಾರೆ.
ಅಂಜೂರದ ಬಾರ್ ಹಾಗೂ ಜಾಮ್‌ಗಳ ರುಚಿ ನೋಡಲು ಈ ದೂರವಾಣಿ ಸಂಖ್ಯೆ: 94821-00426 (ಲಕ್ಷ್ಮೀಸಾಯಿ ನೇಚರ್ಸ್ ಪ್ರೊಡಕ್ಟ್ಸ್), 9448538499 (ವಾಸವಿ ಫಾರ್ಮ್), 63627- 38295 (ಆಂಜಿನೇಯ ಮೌಲ್ಯವರ್ಧನೆ ಘಟಕ), 82173-53704 (ಜಯಶ್ರೀ ಮೌಲ್ಯವರ್ಧನೆ ಘಟಕ) ಸಂಪರ್ಕಿಸಬಹುದು.