ಬಳ್ಳಾರಿ:ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಜೀವ ಕೊಟ್ಟ ತಂದೆಯೇ ಮಗಳನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿ ಬಳಿ ತುಂಗಭದ್ರ ಹೆಚ್‌ಎಲ್‌ಸಿ ಕಾಲುವೆಯಲ್ಲಿ ನಡೆದಿದೆ.
ತನ್ನ ಮಗಳನ್ನು ತಾನೇ ಹತ್ಯೆ ಮಾಡಿರುವುದಾಗಿ ತಂದೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಮಗಳು ತನಗೆ ಪರಿಚಯವಿದ್ದ ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಮನೆಯವರಿಗೆ ಗೊತ್ತಾಗುತ್ತಿದ್ದಂತೆಯೇ ಯುವಕನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು. ಆದ್ರು ಯುವತಿ ಯುವಕನೊಡನೆ ಪ್ರೀತಿ ಒಡನಾಟ ಮುಂದುವರೆಸುತ್ತಿದ್ದಳು ಎಂದು ಶಂಕಿಸಿದ ತಂದೆ ಕುಡುತಿನಿ ಬುಡ್ಗ ಜಂಗಮ ಕಾಲೋನಿ ನಿವಾಸಿ ಓಂಕಾರಗೌಡ ಅ. 31ರಂದು ರಾತ್ರಿ ಆಕೆಯನ್ನು ಹೆಚ್‌ಎಲ್‌ಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಪುಸಲಾಯಿಸಿ ಓಂಕಾರಗೌಡ ಬೈಕ್‌ನಲ್ಲಿ ಮನೆಯಿಂದ ಕರೆದೊಯ್ದ. ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು. ಅಲ್ಲಿಂದ ಹೋಟೆಲ್ಗೆ ಕರೆದೊಯ್ದು ತಿಂಡಿ ತಿನ್ನಿಸಿ, ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ. ಆಭರಣದ ಅಂಗಡಿಯಲ್ಲಿ ಒಂದು ಜತೆ ಓಲೆ, ಉಂಗುರವನ್ನು ಮಗಳಿಗೆ ಕೊಡಿಸಿದ. ಆರೋಪಿ ವಿಚಾರಣೆ ಸಮಯದಲ್ಲಿ ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ.
ಓಂಕಾರಗೌಡನ ಬಂಧನ:ಊರಿಗೆ ಹಿಂತಿರುಗುವ ಹೊತ್ತಿಗೆ ರಾತ್ರಿಯಾಗಿತ್ತು. ಹೆಚ್‌ಎಲ್‌ಸಿ ಕಾಲುವೆ ಬಳಿಗೆ ಮಗಳ ಕರೆತಂದು, ಸ್ವಲ್ಪ ಹೊತ್ತು ಇಲ್ಲೇ ನಿಂತಿರುವ ಕೆಲಸವಿದೆ ಮುಗಿಸಿ ಬರುತ್ತೇನೆ ಎಂದು ಹೇಳಿ ತಂದೆ ಕಣ್ಮರೆಯಾದ. ಆನಂತರ ಹಿಂದಿನಿಂದ ಬಂದು ಕಾಲುವೆಗೆ ತಳ್ಳಿದ. ಬಾಲಕಿ ಅಪ್ಪ, ಅಪ್ಪ ಎಂದು ಕೂಗಿ ನೀರಿನಲ್ಲಿ ಕೊಚ್ಚಿಕೊಂಡು ಹೋದಳು. ಆನಂತರ ಈತ ಬೈಕ್ ಅನ್ನು ತನ್ನ ಗೆಳೆಯ ಭೀಮಪ್ಪನ ಮನೆಯಲ್ಲಿ ಬಿಟ್ಟು ತಿರುಪತಿಗೆ ರೈಲು ಹತ್ತಿದ. ತಿರುಪತಿ ದರ್ಶನ ಮುಗಿಸಿ ವಾಪಸ್ ಬರುವಾಗ ಕೊಪ್ಪಳದ ಬಳಿ ಓಂಕಾರಗೌಡನನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಪೊಲೀಸರಿಗೆ ದೂರು:ಭೀಮಪ್ಪ ಬಾಲಕಿಯ ಕೊಲೆಗೆ ಸಹಕಾರ ನೀಡಿದ್ದಾನೆ. ಆರೋಪಿಯು ಮಗಳ ಹೆಸರಿನಲ್ಲಿ ₹ 20 ಲಕ್ಷ ಬ್ಯಾಂಕಿನಲ್ಲಿ ಇಟ್ಟಿದ್ದ. ಕೊಲೆ ಮಾಡುವ ಮೊದಲು ಅದನ್ನು ಆರೋಪಿ ಗೆಳೆಯನ ಸಹಾಯದಿಂದ ವರ್ಗಾವಣೆ ಮಾಡಿಕೊಂಡಿದ್ದ ಎಂಬ ಸಂಗತಿಯೂ ವಿಚಾರಣೆಯಿಂದ ಗೊತ್ತಾಗಿದೆ. ನವೆಂಬರ್ 1ರಂದು ಬಾಲಕಿ ತಾಯಿ ಗಂಡ ಹಾಗೂ ಪುತ್ರಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಅದನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ.
ಬಾಲಕಿ ಶವಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ತೋರಣಗಲ್ ಡಿವೈಎಸ್‌ಪಿ ಎಸ್ ಎಸ್ ಕಾಶಿಗೌಡ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಸುರೇಶ್ ತಳವಾರ್ ಮತ್ತು ತಾರಾಬಾಯಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಓದಿ:ಮಗಳನ್ನು ಕೊಲೆ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ: ಚಿಕ್ಕೋಡಿ ಕೋರ್ಟ್ನಿಂದ ಮಹತ್ವದ ತೀರ್ಪು..!