ಬಳ್ಳಾರಿ: ಜಿಲ್ಲೆಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ, ರೋಗಿಯನ್ನು ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸಲು ವ್ಹೀಲ್ ಚೇರ್ ನೀಡದಿರುವ ಪ್ರಕರಣವನ್ನು ಡಿಸಿಎಂ ಡಾ. ಅಶ್ವಥ್ನಾರಾಯಣ ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು ವರದಿ ನೀಡುವಂತೆ ವಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಕಾಲೇಜಿನ ಡೀನ್‌ಗೆ ಸೂಚನೆ ನೀಡಿದ್ದಾರೆ.
ವಿಮ್ಸ್ನಲ್ಲಿ ವ್ಹೀಲ್ ಚೇರ್ ನೀಡದ್ದಕ್ಕೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ- ವಿಡಿಯೋ
'ವಿಮ್ಸ್ನಲ್ಲಿ ವ್ಹೀಲ್ ಚೇರ್ ನೀಡದ್ದಕ್ಕೆ ಮಗಳನ್ನ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ - ವಿಡಿಯೋ' ಎಂಬ ಶಿರ್ಷಿಕೆಯಡಿ ಈಟಿವಿ ಭಾರತ ವರದಿಯನ್ನು ಬಿತ್ತರಿಸಿತ್ತು. ಡಿಸಿಎಂ ಡಾ.ಅಶ್ವತ್ಥ ನಾರಾಯಣ ಅವರು ಗರಂ ಆಗಿ ಕೂಡಲೇ ವಿಮ್ಸ್ ನಿರ್ದೇಶಕರ ಕಚೇರಿಗೆ ಕರೆ ಮಾಡಿ ಆ ಘಟನೆಯ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಮ್ಸ್ನ ನಿರ್ದೇಶಕ ಡಾ.ದೇವಾನಂದ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ವಿಮ್ಸ್ ಆಸ್ಪತ್ರೆಯಲ್ಲಿ ತಂದೆಯೊಬ್ಬರು ಮಗಳಿಗೆ ಚಿಕಿತ್ಸೆಗೆ ಕರೆತರಲು ವೀಲ್ಹ್ ಚೇರ್ ನೀಡಲಿಲ್ಲ ಎನ್ನುವ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಇಂದು ಡಿಸಿಎಂ ಅಶ್ವತ್ಥ ನಾರಾಯಣ ಅವರು ಬೆಂಗಳೂರು ಕಚೇರಿಯಿಂದ ಕರೆ ಮಾಡಿ ಮಾಹಿತಿ ಸಹ ಪಡೆದಿದ್ದಾರೆ. ಮುಂದೆ ಈ ತರಹದ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಈ ಬಗ್ಗೆ ವಿಮ್ಸ್ ಸಿಬ್ಬಂದಿ, ವೈದ್ಯರಿಗೆ ಸಹ ಸೂಚನೆ ನೀಡಲಾಗಿದೆ. ವಿಮ್ಸ್ ಆಸ್ಪತ್ರೆಯ ನಾನಾ ವಿಭಾಗಳಲ್ಲಿ ನಾಮಫಲಕ ಅಳವಡಿಸುವುದರೊಂದಿಗೆ ಚಿಕಿತ್ಸೆಗೆ ಕರೆತರಲು ಎರಡು ವೀಲ್ಹ್ ಚೇರ್ಗಳನ್ನು ಕಾಯಂ ಆಗಿ ಕಾಯ್ದಿರಿಸಲಾಗುವುದು. ತುರ್ತು ಚಿಕಿತ್ಸೆ ನೀಡುವ ಬಗ್ಗೆ, ರೋಗಿಗಳಿಗೆ ಕೂಡಲೇ ಸ್ಪಂದಿಸಲು ನಾಮಫಲಕದಲ್ಲಿ ವೈದ್ಯರ ಮಾಹಿತಿ ಹಾಕಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.