ಬಳ್ಳಾರಿ : ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತತೆಯಿಂದ ಮತದಾನ ನಡೆದಿದೆ. ಜಿಲ್ಲೆಯ 56 ಅಭ್ಯರ್ಥಿಗಳ ಭವಿಷ್ಯ ಇವಿಯಂನಲ್ಲಿ ಭದ್ರವಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಹೇಳಿದರು. ಶನಿವಾರ ಮತ ಎಣಿಕೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಮತ ಕೇಂದ್ರಗಳಲ್ಲಿ ನಡೆದ ಚುನಾವಣೆಯ ಮತಪೆಟ್ಟಿಗೆಯು ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ ತಾಂತ್ರಿಕ ಇಂಜಿನಿಯರ್ ಮಹಾವಿದ್ಯಾಲಯದಲ್ಲಿ ಭದ್ರವಾಗಿದ್ದು, ಮತ ಏಣಿಕೆ ಮೇ 13, ಶನಿವಾರ ಬೆಳಗ್ಗೆ 08 ರಿಂದ ನಡೆಯಲಿದೆ. ಐದು ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿರುವ ಭದ್ರತಾ ಕೊಠಡಿಯಲ್ಲಿ ಅಧಿಕಾರಿಗಳಿಂದ ಸೀಲ್ ಮಾಡಿ ಸುರಕ್ಷಿತವಾಗಿ ಇರಿಸಲಾಗಿದೆ.
ಇದನ್ನೂ ಓದಿ :ಚುನಾವಣೆ ಮಾಡೋದರಲ್ಲಿ ಪಿಹೆಚ್ಡಿ ಮಾಡಿದ್ದೇನೆ, ಫಲಿತಾಂಶದ ಬಗ್ಗೆ ಭಯವೇ ಇಲ್ಲ : ಸಿ ಎಸ್ ಪುಟ್ಟರಾಜು
ಮತ ಎಣಿಕೆ ಕೇಂದ್ರ ಸುತ್ತಲೂ 4 ಡಿಎಸ್‍ಪಿ, 12 ಪಿಐ, 23 ಪಿಎಸ್‍ಐ, 90 ಎಎಸ್‍ಐ, 484 ಹೆಡ್ ಕಾನ್‍ಸ್ಟೇಬಲ್ ಹಾಗೂ ಸಿಆರ್ ಪಿಎಫ್ 4 ಡಿಎಆರ್, 3 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಮತ ಎಣಿಕಾ ಕೇಂದ್ರಕ್ಕೆ ಮೂರು ಸುತ್ತಿನ ಭದ್ರತೆ ಕಲ್ಪಿಸಲಾಗಿದೆ. ಮತಗಳ ಎಣಿಕೆಗಾಗಿ ಅಗತ್ಯ ಸಿಬ್ಬಂದಿ ನೇಮಕ ಮಾಡಿ ತರಬೇತಿ ನೀಡಲಾಗಿದೆ. ಮತ ಎಣಿಕೆ ಕೇಂದ್ರದ ಹೊರಗಡೆ ಮತ್ತು ಒಳಗಡೆ ಸಿಸಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ ಎಂದು ಎಸ್ಪಿ ತಿಳಿಸಿದರು.