ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಗೆ 3,667 ಎಕರೆ ಭೂಮಿಯನ್ನು ಪರಭಾರೆ ಮಾಡುವುದನ್ನು ವಿರೋಧಿಸಿ ಜಿಲ್ಲೆಯ ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದಿಂದ ಬಳ್ಳಾರಿವರೆಗೆ ಗುರುವಾರ ಜನಸಂಗ್ರಾಮ ಪರಿಷತ್ ನೇತೃತ್ವದಲ್ಲಿ ರೈತರು ಪಾದಯಾತ್ರೆ ನಡೆಸಿದರು.
ಜನಸಂಗ್ರಾಮ ಪರಿಷತ್ ಮುಖಂಡ ಎಸ್.ಆರ್.ಹಿರೇಮಠ ಅವರ ಸಮಕ್ಷಮದಲ್ಲಿ ವಡ್ಡು ಗ್ರಾಮದ ಹಳ್ಳದರಾಯ ದೇಗುಲದಿಂದ ಬೆಳಗ್ಗೆ 9ಕ್ಕೆ ಪಾದಯಾತ್ರೆಗೆ ಚಾಲನೆ ದೊರೆಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು, ನೂರಾರು ಅಡಿ ಉದ್ದದ ಹಸಿರು ಶಾಲನ್ನು ಹಿಡಿದುಕೊಂಡೇ ಪಾದಯಾತ್ರೆಯಲ್ಲಿ ಮುಂದೆ ಸಾಗಿದರು.
ಗುರುವಾರ ಆರಂಭವಾಗಿರುವ ಪಾದಯಾತ್ರೆ, ಶುಕ್ರವಾರ ಬಳ್ಳಾರಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿಗೆ ತಲುಪಲಿದೆ. ನಂತರ ಸಂಕಲ್ಪ ಸಭೆ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಿದ್ದಾರೆ. ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯುವವರೆಗೂ ಹೋರಾಟ ನಿಲ್ಲದು ಎಂದು ಎಸ್.ಆರ್.ಹಿರೇಮಠ ಎಚ್ಚರಿಸಿದ್ದಾರೆ.
ಸಂಡೂರು ತಾಲೂಕಿನ ಕುರೆಕುಪ್ಪ, ಮುಸಿನಾಯಕನಹಳ್ಳಿ, ತೋರಣಗಲ್ಲು, ಸುಲ್ತಾನಪುರ ಗ್ರಾಮದ 3,667 ಎಕರೆ ಜಮೀನನ್ನು ಮಾರಾಟ ಮಾಡದೆ, ಗುತ್ತಿಗೆ ಅವಧಿ ವಿಸ್ತರಿಸಬೇಕು. ಜಿಂದಾಲ್‌ಗೆ ಈ ಕುರಿತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ಸ್ವತಂತ್ರ ಸಮಿತಿಯಿಂದ ತನಿಖೆಗೆ ಒಳಪಡಿಸಬೇಕು. ಭೂಮಿ ನೀಡಿದವರಿಗೆ ಉದ್ಯೋಗ ದೊರಕಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜೀವ ಸಂಕುಲಕ್ಕೆ ಮಾರಕವಾದ ಎಪ್ಸಿಲಾನ್ ಡಾಂಬರು ಮತ್ತು ಪೇಂಟ್ ಉತ್ಪಾದನಾ ಘಟಕಗಳನ್ನು ಮುಚ್ಚಬೇಕು. ಕುಮಾರಸ್ವಾಮಿ, ಪಾರ್ವತಿ ದೇಗುಲದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು. ತುಂಗಭದ್ರಾ ಮತ್ತು ಆಲಮಟ್ಟಿ ಜಲಾಶಯದ ನೀರನ್ನು ಜಿಂದಾಲ್ ಅಕ್ರಮವಾಗಿ ಬಳಸದಂತೆ ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.
ರೈತ ಸಂಘ, ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರಿ ಸಂಘ, ರೈತ ಕೃಷಿ ಕಾರ್ಮಿಕರ ಸಂಘ, ಚಾಗನೂರು-ಸಿರಿವಾರ ನೀರಾವರಿ ಭೂ ಹೋರಾಟ ಸಮಿತಿ ಹಾಗೂ ಇಸಿಪಿಎಲ್ ಕಾರ್ಖಾನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ಈ ಪಾದಯಾತ್ರೆಗೆ ಬೆಂಬಲ ನೀಡಿವೆ. ಜಿಂದಾಲ್‌ಗೆ ಭೂಮಿ ಮಾರಾಟ ಮಾಡಬಾರದು ಎಂದು ಆಗ್ರಹಿಸಿ ಧರಣಿ ನಡೆಸಿದ್ದ ಬಿಜೆಪಿಯೇ ಈಗ ಅಧಿಕಾರದಲ್ಲಿ ಇರುವುದರಿಂದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬಹುದು ಎಂಬ ನಿರೀಕ್ಷೆಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ನಿಲುವನ್ನು ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.