ಹೊಸಪೇಟೆ (ವಿಜಯನಗರ) :ಆಹಾರ ಇಲಾಖೆ, ಗುತ್ತಿಗೆದಾರನ ಹಗ್ಗ ಜಗ್ಗಾಟದಿಂದ ಜಿಲ್ಲೆಯ ಕೊಟ್ಟೂರು ರೈತರು ಕಂಗಾಲಾಗಿದ್ದು, ಖರೀದಿ ಕೇಂದ್ರದಿಂದ ರಾಗಿ ಸಾಗಿಸಲು ಲಾರಿಗಳು ಬಾರದ ಕಾರಣ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಗಿ ಬೆಳೆದ ರೈತರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಇದರಿಂದ ರೈತರು ಒಂದಿಷ್ಟು ಲಾಭ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಕೊಟ್ಟೂರು ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೈತರು ರಾಗಿ ಬೆಳೆದಿದ್ದಾರೆ. ಬೆಳೆಯನ್ನು ಕಟಾವ್ ಮಾಡಿ ಖರೀದಿ ಕೇಂದ್ರಕ್ಕೆ ತಂದು ಹಲವು ದಿನಗಳಾದರೂ ಯಾರು ಖರೀದಿಗೆ ಮುಂದಾಗುತ್ತಿಲ್ಲ. ಕೊಟ್ಟೂರು ಖರೀದಿ ಕೇಂದ್ರದಿಂದ ರಾಗಿ ಸಾಗಾಟ ಮಾಡಲು ಲಾರಿಗಳು ಬಾರದ ಹಿನ್ನೆಲೆ ರೈತರಿಂದ ರಾಗಿ ಖರೀದಿ ಮಾಡುತ್ತಿಲ್ಲ. ಹೀಗಾಗಿ, ರೈತರು ಟ್ರ್ಯಾಕ್ಟರ್ನೊಂದಿಗೆ ಖರೀದಿ ಕೇಂದ್ರದಲ್ಲೇ ಕಾಯುವಂತಾಗಿದೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಬಂದ 150 ಕ್ಕೂ ಹೆಚ್ಚು ರೈತರು ಹಗರಿಬೊಮ್ಮನಹಳ್ಳಿ ಉಗ್ರಾಣಕ್ಕೆ ಸಾಗಿಸಲು ಲಾರಿಗಳು ಇಲ್ಲದ ಕಾರಣ ನಾಲ್ಕು ದಿನಗಳಿಂದ ಖರೀದಿ ಕೇಂದ್ರದ ಮುಂದೆ ಕಾದು ನಿಂತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಮಾ.12 ರಿಂದ ಖರೀದಿ ಕೇಂದ್ರ ಆರಂಭಿಸಿದ್ದು, ಏ.15 ರವರೆಗೆ ಮಾರಾಟ ಮಾಡಲು ಅವಕಾಶವಿದೆ. ಒಂದು ಕ್ವಿಂಟಾಲ್ ರಾಗಿಗೆ 3,295 ರೂ. ದರ ನಿಗದಿಪಡಿಸಲಾಗಿದ್ದು, 1,250 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿತ್ಯ ಹತ್ತಾರು ವಾಹನಗಳಲ್ಲಿ ರೈತರು ರಾಗಿ ತರುತ್ತಿದ್ದಾರೆ. ಈವರೆಗೆ 12,500 ಕ್ವಿಂಟಾಲ್ ಖರೀದಿಸಲಾಗಿದೆ. ಇನ್ನು 10 ರಿಂದ 15 ಸಾವಿರ ಕ್ವಿಂಟಾಲ್ ರಾಗಿ ಖರೀದಿ ಕೇಂದ್ರಕ್ಕೆ ಬರುವ ನಿರೀಕ್ಷೆ ಇದೆ. ಸದ್ಯ, ರಾಗಿ ತಂದ ರೈತರು ಖರೀದಿ ಕೇಂದ್ರದ ಮುಂದೆ ಕಾಯುತ್ತಿದ್ದಾರೆ.