ಬಳ್ಳಾರಿ:ರಾಜ್ಯ ಸರ್ಕಾರ ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿ ಪರಭಾರೆ ಮಾಡುತ್ತಿರುವ ಕುರಿತು ಜನ ಪ್ರತಿನಿಧಿಗಳ ನಡುವೆ ಪರ- ವಿರೋಧ ಶುರುವಾಗಿರೋದು ರಾಜಕೀಯ ಗಿಮಿಕ್ ಎಂದು ರೈತ ಮುಖಂಡ ಕುಡಿತಿನಿ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ಜಿಂದಾಲ್ ಸಂಸ್ಥೆಗೆ ಭೂಮಿ ಪರ- ವಿರೋಧ ರಾಜಕೀಯ ಗಿಮಿಕ್ ಎಂದ ಕುಡಿತಿನಿ ಶ್ರೀನಿವಾಸ್ ಬಳ್ಳಾರಿಯ ಖಾಸಗಿ ಹೊಟೆಲ್ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವರು ಕೈಗಾರಿಕೆಗಳ ಪರವೆಂದು ಬಹಿರಂಗವಾಗಿ ಹೇಳುತ್ತಾರೆ. ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದಸಿಂಗ್, ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಅವರು ರೈತರ ಪರವಾಗಿರುವಂತೆ ನಾಟಕವಾಡುತ್ತಿದ್ದಾರೆ. ಇಷ್ಟು ದಿನ ಜಿಂದಾಲ್ ಕಾರ್ಖಾನೆ ಸುತ್ತಲಿನ ಗ್ರಾಮಗಳತ್ತ ತಿರುಗಿಯೇ ನೋಡದ ಉಭಯ ನಾಯಕರಿಗೆ ಈಗ ಯಾಕಿಷ್ಟು ಪ್ರೀತಿ ಎಂದು ಶ್ರೀನಿವಾಸ್ ಛೇಡಿಸಿದ್ದಾರೆ.
ಇದೆಲ್ಲ ಕಿಕ್ ಬ್ಯಾಕ್ ಪಡೆಯೋಕೆ ನಾಟಕವಷ್ಟೇ:
ಕೊಂಡಯ್ಯ ಕೈಗಾರಿಕೋದ್ಯಮಿಗಳ ಪರವಾಗಿ ನಿಂತರೆ. ಶಾಸಕ ಆನಂದ ಸಿಂಗ್ ಮತ್ತು ಮಾಜಿ ಶಾಸಕ ಅನಿಲ್ ಲಾಡ್ ಅವರು ರೈತರ ಪರವಾಗಿ ನಿಂತಂತೆ ನಟಿಸುತ್ತಾರೆ. ಹೀಗಾಗಿ, ಜಿಲ್ಲೆಯ ಸ್ವಪಕ್ಷದ ಜನಪ್ರತಿನಿಧಿಗಳ ನಡೆ ಬಹಳ ನಿಗೂಢವಾಗಿದೆ. ಜಿಂದಾಲ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆಯೋದು ಒಂದೇ ಅವರ ಗುರಿಯಾಗಿದೆ. ಅವರ ಮಾತನ್ನು ಯಾರು ನಂಬಬಾರದು ಎಂದು ರೈತರಿಗೆ ಕಿವಿಮಾತು ಹೇಳಿದರು.
ಪ್ರಮಾಣ ಮಾಡಲಿ:
ಜಿಂದಾಲ್ ಸಮೂಹ ಸಂಸ್ಥೆ ಪರವಾಗಿ ನಿಲ್ಲದೇ ರೈತರ ಪರವಾಗಿ ಸದಾ ಇರುತ್ತೇನೆಂದು ದೇಗುಲದಲ್ಲಿ ಶಾಸಕ ಆನಂದಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ಅವರು ಆಣೆ, ಪ್ರಮಾಣ ಮಾಡಲಿ. ನಾವೆಲ್ಲ ಅವರೊಂದಿಗೆ ಇರುತ್ತೇವೆ. ಅದುಬಿಟ್ಟು ಇಂತಹ ಡೋಂಗಿತನವನ್ನು ಮೊದಲು ಅವರು ಬಿಡಬೇಕೆಂದು ತಾಕೀತು ಮಾಡಿದ್ದಾರೆ.
ಸಿಎಂ ಇಲ್ಲೇ ಗ್ರಾಮ ವಾಸ್ತವ್ಯ ಮಾಡಲಿ:
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾಮವೊಂದರಲ್ಲಿ ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲೆಯ ರೈತರ ನಿಯೋಗದೊಂದಿಗೆ ತೆರಳಿ ಅವರನ್ನು ಭೇಟಿ ಯಾಗಿ ಸಂಡೂರು ತಾಲೂಕಿನ ವೇಣಿವೀರಾಪುರ, ಕುಡಿತಿನಿ, ವಡ್ಡು, ಬಸಾಪುರ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು.