ವಿಜಯನಗರ : ಕರಡಿಗಳ ದಾಳಿಯಿಂದ ರೈತನೋರ್ವ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಸಿದ್ದಾಪುರ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಶರಣಯ್ಯ ಬಿಎಂ (60) ಎಂಬುವರು ಕರಡಿ ದಾಳಿಗೆ ಸಿಲುಕಿದ ರೈತ ಎಂದು ತಿಳಿದು ಬಂದಿದೆ.
ಬೆಳ್ಳಂಬೆಳಗ್ಗೆ ಹೊಲಕ್ಕೆ ಹೋಗಿದ್ದಾಗ ರೈತನ ಮೇಲೆ ಕರಡಿ ಮತ್ತು ಮರಿ ಕರಡಿ ಒಮ್ಮೆಲೆ ದಾಳಿ ಮಾಡಿವೆ. ರೈತನ ಮುಖಕ್ಕೆ ಹಿಗ್ಗಾಮುಗ್ಗಾ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಭಯಾನಕ ದಾಳಿಗೆ ಶರಣಯ್ಯ ಅವರ ಮುಖ ಹಾಗೂ ಹಣೆಯ ಭಾಗವು ಕಿತ್ತು ಹೊರ ಬಂದಿದೆ. ಗಾಯಗೊಂಡ ರೈತನಿಗೆ ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತ್ತೀಚೆಗೆ ಕಾಡು ಪ್ರಾಣಿಗಳ ದಾಳಿ ಹೆಚ್ಚಿದ್ದು, ಅರಣ್ಯ ಇಲಾಖೆಯಿಂದ ಕಡಿವಾಣ ಹಾಕಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮೂರು ದಿನಗಳ ಹಿಂದೆ ನಡೆದಿತ್ತು ಚಿರತೆ ದಾಳಿ:ಬೈಕ್ ಸವಾರನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಾಗಳ - ಹಿರೇಹಡಗಲಿ ಗ್ರಾಮಗಳ ರಸ್ತೆಯಲ್ಲಿ ಮೂರು ದಿನಗಳ ಹಿಂದಷ್ಟೇ ನಡೆದಿತ್ತು. ಪ್ರವೀಣ ಎಂಬ ಯುವಕ ಬೈಕ್ನಲ್ಲಿ ತೆರಳುತ್ತಿದ್ದಾಗ ದಾಳಿ ನಡೆಸಿದ ಚಿರತೆ ಗಾಯಗೊಳಿಸಿ ಪರಾರಿಯಾಗಿತ್ತು. ಯುವಕ ಕಿರುಚಾಡಿದಾಗ ಸುತ್ತಮುತ್ತಲಿನ ಜನರು ಓಡಿ ಬಂದಿದ್ದು, ಗಲಾಟೆಗೆ ಹೆದರಿದ ಚಿರತೆ ಕಾಡಿನತ್ತ ಓಡಿತ್ತು. ಗಾಯಗೊಂಡ ಯುವಕನಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.
ಹಾಸನದಲ್ಲೂ ರೈತನ ಮೇಲೆ ಕರಡಿ ದಾಳಿ: ಕರಿ ದಾಳಿಯಿಂದ ರೈತನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಶಿವಣ್ಣ (60) ಎಂಬಾತ ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಬೊಮ್ಮೇನಹಳ್ಳಿ ಗ್ರಾಮದಲ್ಲಿ ಶಿವಣ್ಣ ಎಂದಿನಂತೆ ಜಮೀನಿಗೆ ಕೆಲಸಕ್ಕೆ ಹೋಗಿದ್ದಾಗ ಹಿಂದಿನಿಂದ ಬಂದ ಕರಡಿ ಏಕಾಏಕಿ ಆತನ ಮೇಲೆ ದಾಳಿ ಮಾಡಿತ್ತು. ಕರಡಿಯಿಂದ ತಪ್ಪಿಸಿಕೊಳ್ಳಲಾಗದೇ ಶಿವಣ್ಣ ಕಿರುಚಾಡಿದ್ದು, ಇದನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನ ರೈತರು ಬಂದು ಕರಡಿ ಓಡಿಸಿ ರೈತನನ್ನು ಕಾಪಾಡಿದ್ದರು. ಗಾಯಗೊಂಡಿರುವ ಶಿವಣ್ಣನನ್ನು ಅರಸೀಕೆರೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಎಂದು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:ವಿಜಯನಗರ: ಬೈಕ್ ಸವಾರನ ಮೇಲೆ ಚಿರತೆ ದಾಳಿ, ಯುವಕನಿಗೆ ಗಾಯ