ಬಳ್ಳಾರಿ: ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಪ್ರಯೋಗಶಾಲಾ ಮೇಲ್ವಿಚಾರಕ ಹುದ್ದೆಗೆ ನಕಲಿ ದಾಖಲೆ ಸಲ್ಲಿಸಿ ನೌಕರಿ ಗಿಟ್ಟಿಸಿಕೊಂಡ ಆರೋಪ ಕೇಳಿ ಬಂದಿದೆ.
ಈ ಹುದ್ದೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಗೋಲ್ಮಾಲ್ ನಡೆದಿರೋದು ಮೇಲ್ನೋಟಕ್ಕೆ ಕಂಡುಬಂದಿದೆ. ಹುದ್ದೆಗೆ ಅರ್ಜಿ ಸಲ್ಲಿಸಿದವರ ಪೈಕಿ ಮೂವರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿತ್ತು. ರಾಘವೇಂದ್ರ ಎಂಬ ಅಭ್ಯರ್ಥಿ ಹುದ್ದೆಗೆ ಅರ್ಹರಾಗಿದ್ದರೂ ಆಯ್ಕೆ ಮಾಡದೆ ಪ್ರಹ್ಲಾದ ಎಂಬುವರನ್ನು ಆಯ್ಕೆ ಮಾಡಲಾಗಿತ್ತು.
ಆ ಹುದ್ದೆಗೆ ಆಯ್ಕೆಗೊಂಡ ಪ್ರಹ್ಲಾದ ಎಂಬಾತನು ಕಲಬುರಗಿ ವಿವಿ ಹೆಸರಿನ ನಕಲಿ ಅಂಕಪಟ್ಟಿ ದಾಖಲೆಗಳನ್ನು ಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕ ಹುದ್ದೆಗೆ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿ ಅಭ್ಯರ್ಥಿ ಆಯ್ಕೆಯ ಮುನ್ನ ಮೂಲ ದಾಖಲಾತಿಗಳನ್ನು ಪರಿಶೀಲನೆ ನಡೆಸಬೇಕಾಗಿತ್ತು. ಅದನ್ನು ಮಾಡಲಿಲ್ಲ. ಈ ಬಗ್ಗೆ ನೊಂದ ಅಭ್ಯರ್ಥಿ ರಾಘವೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದಾಗ. ಮೂಲ ದಾಖಲಾತಿಗಳ ಬಗ್ಗೆ ಮಾಹಿತಿ ನೀಡುವಂತೆ ಕಲಬುರಗಿ ವಿವಿಗೆ ಕಳುಹಿಸಲಾಗಿತ್ತು.
ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ದನ ಮಾತನಾಡಿದರು ಅತ್ತ ವಿವಿ ಅಧಿಕಾರಿಗಳು ಕೂಡ ದಾಖಲಾತಿಗಳು ಸರಿ ಇರುತ್ತವೆ ಅಂತಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಾಪಸ್ ಪತ್ರ ಬರೆದಿದ್ದರು. ಇದಾದ ಬಳಿಕ ಮಾಹಿತಿ ಹಕ್ಕಿನಲ್ಲಿ ಪ್ರಹ್ಲಾದ ಅವರ ಅಂಕಪಟ್ಟಿ ದಾಖಲಾತಿಗಳ ಬಗ್ಗೆ ಕೇಳಿದಾಗ ಅಂಕಪಟ್ಟಿ ನಕಲಿ ಅನ್ನೋದನ್ನು ವಿವಿ ತಿಳಿಸಿದೆ. ಇದರಿಂದಾಗಿ ವಿವಿ ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತಿವೆ.
ಆದರೆ ನಕಲಿ ದಾಖಲೆ ಸಲ್ಲಿಸಿ ಸರ್ಕಾರಿ ಹುದ್ದೆ ಪಡೆದ ಪ್ರಹ್ಲಾದ ಕಳೆದ 6 ತಿಂಗಳ ಕಾಲ ಕರ್ತವ್ಯ ಕೂಡ ನಿಭಾಯಿಸಿದ್ದಾರೆ. ವಾಸ್ತವದಲ್ಲಿ ಪ್ರಹ್ಲಾದ ಪದವಿ ಪೂರ್ಣಗೊಳಿಸಿಲ್ಲ. ಜೊತೆಗೆ ಫೇಲ್ ಆಗಿರುವ ವ್ಯಕ್ತಿ. ಆದ್ರೆ ಪದವಿ ಪಾಸ್ ಆಗಿರುವ ನಕಲಿ ಅಂಕಪಟ್ಟಿಯೊಂದಿಗೆ ಆರೋಗ್ಯ ಇಲಾಖೆಯಲ್ಲಿ ಹುದ್ದೆ ಪಡೆದಿದ್ದ. ಇದ್ರಲ್ಲಿ ಆಯ್ಕೆ ಸಮಿತಿ ಪಾತ್ರ ಕೂಡ ಇದೆ ಅನ್ನೋ ಆರೋಪಗಳು ಕೇಳಿಬರುತ್ತಿವೆ
ಇದೀಗ ನಕಲಿ ದಾಖಲೆಗಳು ಸಲ್ಲಿಸಿದ್ದು ನಿಜ ಅಂತಾ ತಿಳಿದ ಮೇಲೆ ಅವರನ್ನ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಆದ್ರೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಮತ್ತೆ ಆರೋಗ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಿಯಮದಂತೆ ಕಾಯ್ದಿರಿಸಿದ ಪಟ್ಟಿಯಲ್ಲಿದ್ದ ರಾಘವೇಂದ್ರ ಎಂಬುವರನ್ನ ನೇಮಕ ಮಾಡಿಕೊಳ್ಳಬೇಕಾಗಿತ್ತು. ಆದ್ರೆ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಅದೇ ಹುದ್ದೆಯನ್ನು 2ಎಗೆ ಮೀಸಲಿರಿಸಿ ಅಧಿಸೂಚನೆ ಹೊರಡಿಸಿರೋದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಅನ್ಯಾಯಕ್ಕೊಳಗಾಗಿರುವ ನನಗೆ ನಿಯಮದ ಪ್ರಕಾರ ಆ ಹುದ್ದೆಯನ್ನ ನೀಡಬೇಕೆಂದು ನೊಂದ ಅಭ್ಯರ್ಥಿ ರಾಘವೇಂದ್ರ ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ (ಡಿಹೆಚ್ ಒ) ಡಾ.ಹೆಚ್.ಎಲ್.ಜನಾರ್ದನ ಅವರು, ಅದು ನಕಲಿ ದಾಖಲೆ ಸೃಷ್ಟಿ ಅಂತ ನಾವು ಹೇಳೋಕಾಗಲ್ಲ. ಏಕೆಂದರೆ, ಆ ಹುದ್ದೆಯ ನೇಮಕಾತಿ ಸಂದರ್ಭದಲ್ಲಿ ಟೆಕ್ನಿಕಲ್ ಕೋರ್ಸುಗಳನ್ನೂ ಕೂಡ ಖಾತರಿ ಪಡಿಸಿರಬಹುದು. ಆಗ ಪದವಿ ವಿದ್ಯಾರ್ಹತೆ ಕೇಳಿರಲಿಕ್ಕಿಲ್ಲ. ಹೀಗಾಗಿ, ಆಯ್ಕೆ ಸಮಿತಿಯು ಈ ತರನಾದ ನಕಲಿ ಅಂಕಪಟ್ಟಿ ಸಲ್ಲಿಸಿರೋದನ್ನ ಸಹಿಸೋಲ್ಲ. ಹಾಗಾಗಿ, ಯಾವ ವ್ಯಕ್ತಿ ಅನ್ಯಾಯವಾಗಿದೆ ಅಂತ ದೂರಿದ್ದಾನೋ ನಾನು ಈಗಾಗಲೇ ಆ ವ್ಯಕ್ತಿಗೆ ಕಾನೂನಾತ್ಮಕ ಹೋರಾಟ ನಡೆಸು ಅಂತ ತಿಳಿಸಿರುವೆ. ಅಲ್ಲದೇ, ಈ ಹುದ್ದೆಯ ಆಯ್ಕೆಯ ಪ್ರಕ್ರಿಯೆ ವೇಳೆಯಲ್ಲಿ ನಾನಂತೂ ಇರಲಿಲ್ಲ. ನಾನು ಬಂದ ಮೇಲೆ ವಿವಿಗೆ ಪತ್ರ ಬರೆದಿದ್ದೆ. ಈ ವ್ಯಕ್ತಿ ಸಲ್ಲಿಸಿರೋದು ನಕಲಿ ಅಂಕಪಟ್ಟಿನಾ ಅಂತ ಕೇಳಿದ್ದೇ. ಅವರು ಒಂದು ಸಲ ನಕಲಿ ಅಂತ ಮತ್ತೊಂದು ಸಲ ಅಸಲಿ ಎಂದು ತಿಳಿಸಿದ್ದಾರೆ. ಹೀಗಾಗಿ, ಆ ವ್ಯಕ್ತಿಯನ್ನು ಟರ್ಮಿನೇಟ್ ಮಾಡಲು ಸೂಚಿಸಿದ್ದೆ. ಅಷ್ಟೊತ್ತಿಗಾಗಲೇ ರಾಜೀನಾಮೆ ಸಲ್ಲಿಸಿದ್ದರು ಎಂದ್ರು ಡಾ.ಜನಾರ್ದನ.