ಬಳ್ಳಾರಿ: ಇಲ್ಲಿನ ಮಯೂರ ಹೊಟೇಲ್ ಹಿಂಭಾಗದಲ್ಲಿ ಕಳೆದೆರಡು ತಿಂಗಳ ಹಿಂದಷ್ಟೇ ಖರೀದಿಸಿದ್ದ ಖಾಲಿ ನಿವೇಶನದ ನಕಲಿ ದಾಖಲೆ ಸೃಷ್ಠಿಗೆ ಅಧಿಕಾರವರ್ಗ ಕುಮ್ಮಕ್ಕು ನೀಡಿದೆ ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಮಾಜಿ ಅಧ್ಯಕ್ಷ ಮುಲ್ಲಂಗಿ ರವೀಂದ್ರಬಾಬು ದೂರಿದ್ದಾರೆ.
ಬಳ್ಳಾರಿ ಡಿಸಿ ಕಚೇರಿಯ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರಬಾಬು, ಈ ಖಾಲಿ ನಿವೇಶನವನ್ನು ಹರಿಶ್ಚಂದ್ರ ರೆಡ್ಡಿ ಎಂಬುವವರಿಂದ ನಾನು ಖರೀದಿಸಿದ್ದೆ. ಆದರೆ, ಸರ್ವೇ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನೋಂದಣಾಧಿಕಾರಿ ಇಲಾಖೆ ಅಧಿಕಾರಿಗಳು ಖಾಲಿ ನಿವೇಶನದ ನಕಲಿ ದಾಖಲೆ ಸೃಷ್ಠಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹುಸೇನ್, ಮಹಮ್ಮದ, ಫಿರೋಜಾ ಬೇಗಂ ಹೆಸರಿನಡಿ ನಕಲಿ ದಾಖಲೆ ಸೃಷ್ಠಿಸಿದ್ದಾರೆ. ಜಿ1, ಜಿ 2 ಖಾಲಿ ನಿವೇಶನದಲ್ಲಿ ಆರೇಳು ಮಂದಿ ಈ ಖಾಲಿ ನಿವೇಶನವನ್ನು ಕಬ್ಜಾ ಮಾಡಲು ನಿರ್ಧರಿಸಿದ್ದರು. ಜಿ1 ನಿವೇಶನದಲ್ಲಿ ತಾತ್ಕಾಲಿಕ ಜೀವನ ಸಾಗಿಸುತ್ತಿರುವವರನ್ನು ಖಾಲಿ ಮಾಡಿಸಲಾಗಿದೆ. ಅವರ ಜೀವನೋಪಾಯಕ್ಕಾಗಿ ಅಗತ್ಯ ಪರಿಹಾರ ನೀಡಲಾಗಿದೆ. ಆದರೆ, ಜಿ2 ನಿವೇಶನದಲ್ಲಿನ ವ್ಯಕ್ತಿಗಳು ನಕಲಿ ದಾಖಲೆ ಹೊಂದಿದ್ದು, ಅನಗತ್ಯವಾಗಿ ರಾಜಕರಣ ಮಾಡಲು ಹೊರಟಿದ್ದಾರೆ. ಅದಕ್ಕೆ ಅಧಿಕಾರ ವರ್ಗವೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಕೆಲ ಮಧ್ಯವರ್ತಿಗಳು ಸಾಥ್ ನೀಡುತ್ತಿದ್ದು, ಪಾಲಿಕೆ ಅಧಿಕಾರಿಗಳು ಈ ಖಾಲಿ ನಿವೇಶನದ ಮೂಲ ಹಕ್ಕುದಾರರನ್ನ ಪೇಚೆಗೆ ಸಿಲುಕಿಸಿದ್ದಾರೆ. ಈ ನಕಲಿ ದಾಖಲೆ ಹೊಂದಿರುವವರು ಬಾರ್ನಲ್ಲಿ ಕಾರ್ಯನಿರ್ವಹಿಸುವವರು. ಟೀ ಹಾಗೂ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವವರಿದ್ದಾರೆ. ಅವರು ಹೇಗೆ ನಕಲಿ ದಾಖಲೆ ಸೃಷ್ಠಿಸುವಷ್ಟು ಹಣ ಸಂದಾಯ ಮಾಡಲು ಸಾಧ್ಯ. ಇದರಿಂದ ಪಕ್ಕಾ ಗೊತ್ತಾಗುತ್ತೆ. ನಕಲಿ ದಾಖಲೆ ಸೃಷ್ಠಿಗೆ ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿದ್ದರ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ನಗರಾದ್ಯಂತ ಖಾಸಗಿ ನಿವೇಶನಗಳ ನಕಲಿ ದಾಖಲೆ ಸೃಷ್ಠಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಕ್ರಮ- ಸಕ್ರಮದಡಿ ಈ ಖಾಲಿ ನಿವೇಶನಗಳನ್ನು ಮೂಲ ಮಾಲೀಕರ ಹೆಸರಿನಿಂದ ಬೇರೆಯವರ ಹೆಸರಿಗೆ ಮಾಡಿಕೊಡುವಷ್ಟರ ಮಟ್ಟಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಕುರಿತು ಕೂಲಂಕಷವಾಗಿ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.