ಬಳ್ಳಾರಿ: ಕೋವಿಡ್ ಕಾರಣ ಪಡಿತರ ಅಂಗಡಿಯಲ್ಲಿ ಬಯೋ ಮೆಟ್ರಿಕ್ (ಬೆರಳಚ್ಚು) ನೀಡುವುದಕ್ಕೆ ವಿನಾಯಿತಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿದಾರರು ಬಯೋಮೆಟ್ರಿಕ್ ತಂಬ್ ನೀಡುವಂತೆ ಒತ್ತಾಯಿಸಬಾರದು ಎಂದು ಅವರು ಸೂಚಿಸಿದ್ದಾರೆ. ಪಡಿತರ ಚೀಟಿದಾರರ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ನೀಡಿ ಪಡಿತರ ವಿತರಿಸಲಾಗುವುದು. ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ವಿಶೇಷಚೇತನರಿಗೆ ವಿನಾಯತಿ ಸೌಲಭ್ಯದಡಿ ಪಡಿತರ ವಿತರಿಸಲಾಗುವುದು. ಪಡಿತರ ಚೀಟಿದಾರರ ಪರಿಶೀಲನಾ ಪಟ್ಟಿ ಅಥವಾ ಕೈ ಬಿಲ್ ಮೂಲಕವೂ ನೇರವಾಗಿ ಪಡಿತರ ವಿತರಣೆ ಮಾಡಲಾಗುವುದು. ರಾಜ್ಯ ಮತ್ತು ಹೊರರಾಜ್ಯದ ಪಡಿತರ ಚೀಟಿದಾರರಿಗೆ ಪೋರ್ಟೆಬೆಲಿಟಿ ಸೌಲಭ್ಯದ ಮೂಲಕ ಪಡಿತರ ಪಡೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇದನ್ನೂಓದಿ: ಕೋವಿಡ್ ನಿಯಂತ್ರಣಕ್ಕೆ ಬಳ್ಳಾರಿ ಮಹಾನಗರ ಪಾಲಿಕೆಯಿಂದ ಸಕಲ ಕ್ರಮ
ಕೋವಿಡ್ ಎರಡನೆ ಅಲೆ ಹಿನ್ನೆಲೆಯಲ್ಲಿ 2021 ಮೇ ತಿಂಗಳ ಪಡಿತರವನ್ನು ಪರಿಶೀಲನಾ ಪಟ್ಟಿ (ಚೆಕ್ ಲಿಸ್ಟ್) ಅಥವಾ ಯಾವುದಾದರೂ ಮೊಬೈಲ್ಗೆ ಒಟಿಪಿ ನೀಡುವುದರ ಮೂಲಕ ವಿತರಿಸಲು ಅವಕಾಶ ನೀಡಬೇಕೆಂದು ರಾಜ್ಯ ಪಡಿತರ ವಿತರಕರ ಸಂಘವು ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿ ಪಡಿತರ ವಿತರಣೆಗೆ ಪರಿಶೀಲನಾ ಪಟ್ಟಿ (ಚೆಕ್ ಲಿಸ್ಟ್) ಸೌಲಭ್ಯ ಸೇರಿದಂತೆ ಸುಲಭವಾಗಿ ಪಡಿತರ ವಿತರಿಸಲು ಸಾಧ್ಯವಾಗುವ ಅನೇಕ ರೀತಿಯ ಅವಕಾಶಗಳನ್ನು ನ್ಯಾಯಬೆಲೆ ಅಂಗಡಿಗೆ ಕಲ್ಪಿಸಿಕೊಡಲಾಗಿದೆ.
ಕೋವಿಡ್ 1 ನೇ ಅಲೆಯ ಸಂದರ್ಭದಲ್ಲೂ ಇದೇ ರೀತಿ ಬಯೋಮೆಟ್ರಿಕ್ ಬದಲಾಗಿ ಒಟಿಪಿ ಸೌಲಭ್ಯ ಮಾಡಲಾಗಿತ್ತು. ಆದರೆ, ಕೆಲ ಪಡಿತರ ಅಂಗಡಿ ಮಾಲೀಕರು ಒಂದೇ ಮೊಬೈಲ್ ನಂಬರ್ ಬಳಸಿ ಹಲವು ಮಂದಿಗೆ ಪಡಿತರ ವಿತರಿಸಿದ ಪ್ರಕರಣಗಳು ವರದಿಯಾಗಿವೆ. ಕೇಂದ್ರ ಸರ್ಕಾರದ ನಿಯಮದಂತೆ, ಎಲ್ಲಾ ರಾಜ್ಯಗಳು ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ಪಡಿತರ ವಿತರಿಸಬೇಕು. ಆಗ ಮಾತ್ರ ಸರ್ಕಾರಕ್ಕೆ ಪಡಿತರ ವಿತರಣೆಯ ದತ್ತಾಂಶಗಳು ರವಾನೆಯಾಗುತ್ತದೆ. ಆದರೆ, ಕೋವಿಡ್ ಕಾರಣ ಪಡಿತರ ಚೀಟಿದಾರರು ಮತ್ತು ವಿತರಕರ ಆರೋಗ್ಯದ ದೃಷ್ಠಿಯಿಂದ ಈ ರೀತಿಯ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.