ಪ್ರತಿಯೊಬ್ಬರಿಗೂ ಕಾನೂನು ತಿಳಿವಳಿಕೆ ಅಗತ್ಯ : ಚಂದ್ರಿಕಾ - ಕಾನೂನು ಮಹಾವಿದ್ಯಾಲಯ
ಗ್ರಾಮೀಣ ಭಾಗದಲ್ಲಿನ ಜನರಿಗೆ ಕಾನೂನು ಅರಿವು ಬಹಳ ಮುಖ್ಯವಾಗಿದೆ ಎಂದು ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದ ಪ್ರೊ. ಚಂದ್ರಿಕಾ ಅವರು ಹೇಳಿದ್ದಾರೆ.
![ಪ್ರತಿಯೊಬ್ಬರಿಗೂ ಕಾನೂನು ತಿಳಿವಳಿಕೆ ಅಗತ್ಯ : ಚಂದ್ರಿಕಾ](https://etvbharatimages.akamaized.net/etvbharat/prod-images/768-512-4283826-thumbnail-3x2-sanju.jpg)
ಬಳ್ಳಾರಿ:ಗ್ರಾಮೀಣ ಭಾಗದಲ್ಲಿನ ಜನರಿಗೆ ಕಾನೂನು ಅರಿವು ಬಹಳ ಮುಖ್ಯವಾಗಿದೆ ಎಂದು ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದ ಪ್ರೊ. ಚಂದ್ರಿಕಾ ಅವರು ಹೇಳಿದ್ದಾರೆ.
ತಾಲೂಕಿನ ಕರ್ಚೇಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ವರನ್ನು ಸಮಾನವಾಗಿ ಕಾಣುವುದು ಕಾನೂನು ಮಾತ್ರವಾಗಿದ್ದು, ಕಾನೂನಿನ ಕುರಿತು ಹೆಚ್ಚಾಗಿ ಜಾಗೃತಿ ಮೂಡಿಸುವುದು ನಮ್ಮ ಧ್ಯೇಯವಾಗಿಬೇಕಿದೆ ಎಂದು ಅವರು ಹೇಳಿದರು.
ದ್ವಿತೀಯ ವರ್ಷದ ಕಾನೂನು ವಿದ್ಯಾರ್ಥಿಗಳಾದ ಸೋನು ಸುಹೇಲ್, ವಿರೇಶ್, ಭುವನೇಶ್ವರಿ, ಪಾರ್ವತಿ ಅವರು ವರದಕ್ಷಿಣೆ ಕಿರುಕುಳವನ್ನು ತಡೆಗಟ್ಟುವುದು ಹಾಗೂ ಕಾನೂನಾತ್ಮಕ ಶಿಕ್ಷೆಗಳು, ಮಕ್ಕಳ ಹಕ್ಕುಗಳು, ಮೊಬೈಲ್ ದುರ್ಬಳಕೆಯಿಂದಾಗುವ ಅಪರಾಧಗಳ ಹಾಗೂ ಕಾನೂನಾತ್ಮಕ ಕ್ರಮಗಳ ಹಾಗೂ ಮೋಟಾರು ವಾಹನ ಕಾಯ್ದೆಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾದಾಮಿ ಗಂಗಾಧರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಶ್ರೀಕಾಂತ್, ಗ್ರಾಮ ಪಂಚಾಯತಿ ಸದಸ್ಯರು, ಕರ್ಚೇಡು ಗ್ರಾಮಸ್ಥರು, ಯುವಕರು, ಶಾಲಾ ಮಕ್ಕಳು ಹಾಗೂ ಇತರರು ಇದ್ದರು.