ಬಳ್ಳಾರಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡಿದ್ರೂ, ನಾನು ಕೂಡ ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲಿಯೇ ಇರುತ್ತೇನೆ, ಇದರಲ್ಲೇ ಮಂದುವರಿಯುತ್ತೇನೆ ಮತ್ತು ಹಿಂದೆ ಸರಿಯುವ ಮಾತು ನನ್ನ ಚರಿತ್ರೆಯಲ್ಲಿಯೇ ಇಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಪಕ್ಷ ಸ್ಥಾಪಿಸುತ್ತಿರುವ ವೇಳೆ ನನಗೂ ಕೇಳಿದರು. ನಾನು ಅವರಿಗೆ ಹೊಸ ಪಕ್ಷ ಕಟ್ಟುವುದು ಬೇಡ ಎಂದು ಹೇಳಿದೆ. ಆದರೂ ನನ್ನ ಮಾತು ಅವರು ಕೇಳಲಿಲ್ಲ. ಅವರು ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ರಾಜಕೀಯದಲ್ಲಿ ಇರುವಾಗ ಮನುಷ್ಯ ತಾಳ್ಮೆಯಿಂದ ಇರಬೇಕು. ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿ ಶೇಕಡಾ ನೂರರಷ್ಟು ತಪ್ಪು ಮಾಡಿದ್ದಾರೆ. ಪಕ್ಷ ಸ್ಥಾಪನೆ ವಿಚಾರದಲ್ಲಿ ಮುನ್ನಡೆ ಮತ್ತು ಹಿನ್ನಡೆಯನ್ನು ಜನರು ನಿರ್ಧಾರ ಮಾಡುತ್ತಾರೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.
ಜನಾರ್ದನ ರೆಡ್ಡಿ ಮನವೊಲಿಸಲು ಈಗಲೂ ಶ್ರೀರಾಮುಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಚುನಾವಣೆಗೂ ಮುನ್ನ ಅವರನ್ನು ಬಿಜೆಪಿಗೆ ಕರೆತರಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಏನೂ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. 2013ರಲ್ಲಿ ಜನಾರ್ದನ ರೆಡ್ಡಿ ಸಲುವಾಗಿ ನಾನು ತ್ಯಾಗ ಮಾಡಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ, ಸಹೋದರ ಜೈಲಿನಲ್ಲಿದ್ದ ಕಾರಣ ನಾನು ನ್ಯಾಯಾಲಯಗಳಿಗೆ ಓಡಾಡಬೇಕೆಂದು ಸ್ಪರ್ಧಿಸಿರಲಿಲ್ಲ. ಸ್ಪರ್ಧೆಯಲ್ಲಿ ಗೆದ್ದು, ಕ್ಷೇತ್ರದಲ್ಲಿ ಇಲ್ಲದೆ ಕೋರ್ಟ್ಗೆ ಅಲೆದಾಡುತ್ತಿದ್ದರೆ, ಜನರ ಸೇವೆಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಐದು ವರ್ಷ ಚುನಾವಣೆಯಿಂದ ತಮ್ಮನಿಗಾಗಿಯೇ ದೂರವಿದ್ದೆ. ಆದರೆ ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಈ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಬಂದು ನಿಂತರೂ ನಾನು ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.