ಬಳ್ಳಾರಿ:ರಾಜ್ಯ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ ಸುಮಾರು 3,667 ಎಕರೆ ಭೂಮಿ ಪರಾಭಾರೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಜೂ. 15ರಂದು ಜಿಂದಾಲ್ ಕಾರ್ಖಾನೆ ಎದುರು ಕೈಗೊಂಡಿದ್ದ ಮುತ್ತಿಗೆಯಲ್ಲಿ ಪಾಲ್ಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲಿಗರಿಗೆ ಜಿಲ್ಲೆಯ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದಾರೆ.
ಅಧಿನಿಯಮ- 107ರನ್ವಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದಡಿ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದು, ವಾಟಾಳ್ ನಾಗರಾಜ್ ಸಹಚರರಾದ ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ. ಸ್ವಾಮಿ, ಮಲ್ಲಿಕಾರ್ಜುನ, ಶಿವಕುಮಾರ, ವೀರೇಶ, ರಾಜ, ರವಿ ಕುಮಾರ , ಬಿ.ಆರ್. ಕೃಷ್ಣ ಸೇರಿದಂತೆ ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ, ಹೊಸಪೇಟೆ ತಾಲೂಕಿನ ಭಾಗದ ಹೋರಾಟಗಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಅಲ್ಲದೇ, ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿ ಮೂರು ಲಕ್ಷ ರೂ.ಗಳ ಬಾಂಡ್ ನೀಡಬೇಕು. ಉತ್ತಮ ವ್ಯಕ್ತಿಯೊಬ್ಬರ ಸಾಕ್ಷಿ ನೀಡಬೇಕು. ಹಾಗೂ ಇನ್ಮುಂದೆ ಯಾವುದೇ ಸಮಾವೇಶ, ರಸ್ತೆ ತಡೆಯಂತಹ ಪ್ರತಿಭಟನೆಯನ್ನು ಪರವಾನಗಿ ಪಡೆಯದೆ ಮಾಡಲ್ಲವೆಂದು ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. ಮುಂದಿನ ಒಂದು ವರ್ಷಕ್ಕೆ ಅನ್ವಯವಾಗುವಂತೆ ಆ ಮುಚ್ಚಳಿಕೆ ಪತ್ರ ಇರಬೇಕು ಎಂದು ದಂಡಾಧಿಕಾರಿಗಳು ಸೂಚಿಸಿದ್ದಾರೆ.
ಘಟನೆಯ ವಿವರ:
ಜಿಂದಾಲ್ ಕಾರ್ಖಾನೆ ಮುತ್ತಿಗೆ ಹಾಕುವ ವೇಳೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರ ಪರವಾನಗಿ ಪಡೆಯದೆ, ಏಕಾಏಕಿ ಆ ಕಾರ್ಖಾನೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಯಾವುದೇ ರೀತಿಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಉಂಟಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಇನ್ನಿತರೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.