ಬಳ್ಳಾರಿ:ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಿಲ್ಲೆಯಲ್ಲಿ ಈಗಾಗಲೇ ಅನ್ವಯಿಸಲಾಗುತ್ತಿದ್ದು, ಬಳ್ಳಾರಿ ಸಂಚಾರಿ ಪೊಲೀಸರು ವಿವಿಧ ನಿಯಮಗಳ ದಂಡದ ವಿವರ ಒಳಗೊಂಡ ಜಾಗೃತಿ ಫಲಕಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿದ್ದಾರೆ.
ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡದ ವಿವರ ತಿಳಿಸುವುದರ ಜೊತೆಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕೋರಿಕೊಳ್ಳುತ್ತಿದ್ದಾರೆ. ನಗರದ ಗಡಗಿ ಚನ್ನಪ್ಪ ವೃತ್ತ, ಹೆಚ್.ಆರ್. ಗವಿಯಪ್ಪ ವೃತ್ತ, ವಾಲ್ಮೀಕಿ ವೃತ್ತ, ದುರ್ಗಮ್ಮ ದೇವಸ್ಥಾನ, ಬಸ್ ನಿಲ್ದಾಣ, ಬೆಂಗಳೂರು ರಸ್ತೆ, ಇಂದಿರಾ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಈ ದಂಡ ಜಾಗೃತಿ ಸಂದೇಶ ಹೊತ್ತ ಫಲಕಗಳು ಕಣ್ಣಿಗೆ ಕಾಣಿಸುತ್ತವೆ.
ಸಂಚಾರಿ ಪೊಲೀಸರಿಂದ ಅಳವಡಿಸಲಾದ 'ಫೈನ್' ಜಾಗೃತಿ ಫಲಕ ಈ ಜಾಗೃತಿ ಫಲಕಗಳಲ್ಲಿ ಡಿಎಲ್ ಇಲ್ಲದೇ ವಾಹನ ಚಲಾಯಿಸಿದರೇ ಎಷ್ಟು ದಂಡ, ಹೆಲ್ಮೆಟ್ ರಹಿತ ವಾಹನ ಚಾಲನೆ, ಅತಿ ವೇಗದ ಚಾಲನೆ, ಅನರ್ಹರಾಗಿದ್ದರೂ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಮದ್ಯಪಾನ ಮಾಡಿ ವಾಹನ ಚಾಲನೆ, ತುರ್ತು ಸೇವೆಯ ವಾಹನಗಳಿಗೆ ದಾರಿ ಬಿಡದಿದ್ದರೆ, ವಿಮೆ ರಹಿತ ವಾಹನ ಚಾಲನೆ ಮಾಡಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದು ಸೇರಿದಂತೆ ವಿವಿಧ ರೀತಿಯ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡದ ವಿವರಗಳು ಒಳಗೊಂಡಿದೆ.
ಹೊಸ ಶುಲ್ಕದ ಮಾಹಿತಿಯನ್ನು ಎಲ್ಲ ಪೊಲೀಸರಿಗೆ ನೀಡಲಾಗಿದೆ. ನಿಯಮಗಳನ್ನು ಉಲ್ಲಂಘಿಸುವವರಿಂದ ಪರಿಷ್ಕೃತ ಶುಲ್ಕ ವಸೂಲಿ ಮಾಡಲಿದ್ದಾರೆ ಎಂದು ಬಳ್ಳಾರಿ ನಗರ ಡಿವೈಎಸ್ಪಿ ರಾಮರಾವ್ ತಿಳಿಸಿದ್ದಾರೆ. ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸದೇ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿ ಎಂದು ಅವರು ಮನವಿ ಮಾಡಿದ್ದಾರೆ.