ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಬಿಲ್ ನೀಡಲು ಮತ್ತು ವಸೂಲಿಗೆ ಹೋದ ಸಿಬ್ಬಂದಿಯನ್ನು ವಾಪಸ್ ಕಳುಹಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎಂದು ಕಾಂಗ್ರೆಸ್ ಭರವಸೆ ಕೊಟ್ಟಿದೆ. ಹಾಗಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಗ್ರಾಹಕರು ಹೇಳುತ್ತಿದ್ದಾರೆ.
ಮೇ 10 ರಂದು ವಿಧಾನಸಭೆ ಚುನಾವಣೆ ನಡೆದು ಮೇ 13ರಂದು ಫಲಿತಾಂಶ ಪ್ರಕಟವಾಗಿದೆ. ಐದು ದಿನಗಳಿಂದ ಹಳ್ಳಿಗಳಿಗೆ ಹೋಗುತ್ತಿರುವ ಜೆಸ್ಕಾಂ ಸಿಬ್ಬಂದಿ, ಮೀಟರ್ ರೀಡರ್‌ಗಳು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಚಾಲ್ತಿ ವಿದ್ಯುತ್ ಬಿಲ್‌ಗಳು ಹೋಗಲಿ, ಹಳೇ ಬಾಕಿಯನ್ನೂ ಪಾವತಿಸುತ್ತಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 7.76 ಲಕ್ಷ ಗ್ರಾಹಕರಿದ್ದು, ಮಾರ್ಚ್ ಅಂತ್ಯದವರೆಗೆ ಬರಬೇಕಾದ ಬಾಕಿ ₹845 ಕೋಟಿ ಇದೆ.
ಪ್ರತಿ ತಿಂಗಳು ಜೆಸ್ಕಾಂ ತನ್ನ ಗ್ರಾಹಕರಿಗೆ ₹20.66 ಕೋಟಿ ಮೊತ್ತದ ವಿದ್ಯುತ್ ಪೂರೈಸುತ್ತಿದೆ. ವಸೂಲಾಗುತ್ತಿರುವ ಬಿಲ್ ₹18. 80 ಕೋಟಿ ಇದ್ದು ತಿಂಗಳಿಗೆ ಸುಮಾರು ₹2 ಕೋಟಿ ನಷ್ಟವಾಗುತ್ತಿದೆ. ಪೂರೈಕೆ ಮತ್ತಿತರ ಸೋರಿಕೆಯಿಂದ ಶೇ 12ರಷ್ಟು ವಿದ್ಯುತ್ ನಷ್ಟವಾಗುತ್ತಿದೆ. ಮೊದಲು ನಷ್ಟದ ಪ್ರಮಾಣ ಶೇ 15 ರಷ್ಟಿತ್ತು. ಈ ಪ್ರಮಾಣವನ್ನು ತಗ್ಗಿಸಲಾಗಿದೆ. ಭಾಗ್ಯ ಜ್ಯೋತಿ ಫಲಾನುಭವಿಗಳಿಗೆ 40 ಯುನಿಟ್ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ಉಚಿತ ವಿದ್ಯುತ್ ಕೊಡಲಾಗುತ್ತಿದೆ. ಇದಲ್ಲದೆ, ಇನ್ನೂ ಶೇ 30ರಷ್ಟು ಗ್ರಾಹಕರಿಗೆ ಮೀಟರ್‌ಗಳನ್ನೇ ಅಳವಡಿಸಿಲ್ಲ.