ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜುಲೈ 13ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಲೆಕ್ಷನ್ ನಡೆಯಲಿದೆ. ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿಂದು ಚುನಾವಣಾಧಿಕಾರಿ ರಾಜಾರೆಡ್ಡಿಯವರಿಗೆ ಎರಡು ಬಣದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು.
ಕಳೆದ ಜೂನ್ 13 ರಂದು ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಇಲಾಖೆಗಳ 62 ಸದಸ್ಯರು ಹಾಗೂ ಆಯಾ ತಾಲೂಕು ಘಟಕದ ಅಂದಾಜು ಹತ್ತು ಮಂದಿ ಅಧ್ಯಕ್ಷರು, ಈ ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ನ ಸದಸ್ಯ ಸ್ಥಾನಕ್ಕೆ ಚುನಾವಣೆ ಮುಖೇನ ಆಯ್ಕೆ ಮಾಡುತ್ತಾರೆ. ಮಾಜಿ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಮಾಜಿ ಸದಸ್ಯ ಡಾ. ರಾಜಶೇಖರ ಗಾಣಿಗೇರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ ಬಣದಿಂದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.