ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ನಗರಸಭೆ - ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗೆ ನಾಳೆ ನಡೆಯಲಿರುವ ಮತದಾನದ ನಿಮಿತ್ತ ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಿರಗುಪ್ಪ ನಗರಸಭೆ ವ್ಯಾಪ್ತಿಯ ವಾರ್ಡ್ಗಳಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಶಾಸಕ ಸೋಮಲಿಂಗಪ್ಪ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಟ್ಟು ಮತಯಾಚನೆ ಮಾಡಿದ್ರು.
ಪ್ರಚಾರ ನಡೆಸುತ್ತಿರುವ ಶಾಸಕ ಸೋಮಲಿಂಗಪ್ಪ ಆಯಾ ವಾರ್ಡ್ಗಳಲ್ಲಿ ಎದುರಾದ ನಿವೇಶನ ಅಥವಾ ಮನೆಗಳ ಪಟ್ಟಾ ಸಮಸ್ಯೆ ಕುರಿತು ಅವರು ಮಾತನಾಡಿದ್ರು. ಕೆಲ ವಾರ್ಡ್ಗಳಲ್ಲಿ ನಿವೇಶನ ಅಥವಾ ಮನೆಗಳ ಜಾಗವು ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಆ ಕುರಿತು ನಾನು ಮಾತನಾಡಲಿಕ್ಕೆ ಬರೋದಿಲ್ಲ. ನ್ಯಾಯಾಲಯದಲ್ಲಿದ್ದ ಯಾವುದೇ ಪ್ರಕರಣಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಪ್ರತಿಕ್ರಿಯಿಸಲು ಬರೋದಿಲ್ಲ. ಹಾಗಾಗಿ, ನಾನು ನಿಮಗೆ ಪಟ್ಟಾ ಕೊಡಿಸುವುದಾಗಿ ಭರವಸೆ ಕೂಡ ನೀಡಲ್ಲ. ನೀವು ಎದುರಾಳಿಗಳ ಪೊಳ್ಳು ಭರವಸೆಗಳಿಗೆ ಕಿವಿಗೊಡಬಾರದು. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಆಗಾಗಿ, ಕಮಲದ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದ್ರು.
ಆದ್ರೆ, ವಾಸ್ತವವಾಗಿ ಶಾಸಕರು ಬಹಿರಂಗ ಪ್ರಚಾರ ನಡೆಸಿದ್ರು ಎಂಬ ದೂರು ಕೂಡ ಕೇಳಿಬಂದಿದೆ. ಅಭಿವೃದ್ಧಿಪರವಾದ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೂಡ ಇದೆ. ಈ ಕುರಿತು ಸಿರಗುಪ್ಪ ತಹಸೀಲ್ದಾರ್ ಅವರನ್ನ ವಿಚಾರಿಸಿದ್ರೆ, ನಮ್ಮಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ಅದನ್ನ ಸಮರ್ಥವಾಗಿ ನಮ್ಮ ಚುನಾವಣಾ ವೀಕ್ಷಕರ ತಂಡ ನಿರ್ವಹಿಸುತ್ತಿದೆ. ವಾರ್ಡ್ವಾರು ಸ್ಕ್ವಾಡ್ ನಿಯೋಜಿಸಿರುವುದಾಗಿ ತಿಳಿಸಿದ್ದಾರೆ.