ಸಚಿವ ಎನ್ ಚಲುವರಾಯಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಳ್ಳಾರಿ:ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ರೂ. ತೆರಿಗೆ ಹಣ ಪಾವತಿಯಾಗುತ್ತಿದೆ. ಆದರೆ ರಾಜ್ಯಕ್ಕೆ ಕೇವಲ 50 ಸಾವಿರ ಕೋಟಿ ಬರುತ್ತಿದೆ. ನಾವೆಲ್ಲಾ ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಬರ ಪರಿಹಾರ ಕೇಳುವುದು ನಮ್ಮ ಹಕ್ಕು, ನ್ಯಾಯ ಸಮ್ಮತವಾಗಿ ಕೇಂದ್ರ ಸರ್ಕಾರ ಅದನ್ನು ನೀಡಬೇಕಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಇಂದು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಳ್ಳಾರಿ ವಿಜಯನಗರ ಜಿಲ್ಲಾ ಕೃಷಿ, ಜಲಾನಯನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ಬೆಳೆ ಹಾನಿ ಸಮೀಕ್ಷೆ:ಇಡೀ ದೇಶದಲ್ಲಿ ಹೆಚ್ಚು ರಾಜ್ಯಗಳು ಬರದ ಸಮಸ್ಯೆಯನ್ನು ಎದುರಿಸುತ್ತಿವೆ. ಕೇಂದ್ರ ಸರ್ಕಾರದ ಇಲಾಖೆಯ ಕಾರ್ಯದರ್ಶಿಗಳಿಗೆ, ವಿತ್ತ ಸಚಿವರನ್ನು ಭೇಟಿ ಮಾಡಿ ಬರ ಪರಿಹಾರದ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ. 6636 ಕೋಟಿ ರೂ. ಗಳಷ್ಟು ಬೆಳೆ ಹಾನಿ ಸಮೀಕ್ಷೆ ಅಂದಾಜು ಮಾಡಿ ಕೇಂದ್ರಕ್ಕೆ ಕಳಿಸಿದ್ದೇವೆ.
ಕೇಂದ್ರ ಸರ್ಕಾರ ಬರ ಪರಿಹಾರವನ್ನು ಶೀಘ್ರದಲ್ಲಿ ಒದಗಿಸುವ ನಿರೀಕ್ಷೆ ಇದೆ. ಅವರು ಬಿಡುಗಡೆ ಮಾಡಿದ ದಿನವೇ ರೈತರ ಖಾತೆಗಳಿಗೆ ಜಮಾ ಮಾಡಲಿದ್ದೇವೆ. ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಕುಡಿಯುವ ನೀರು, ಮೇವಿನ ನಿರ್ವಹಣೆಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ರೈತರ ಹಿತವನ್ನು ಸರ್ಕಾರ ಕಾಪಾಡುತ್ತಿದೆ ಎಂದು ಸಚಿವರು ವಿವರಿಸಿದರು.
ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಹಾಗೂ ಮಧ್ಯಂತರ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದ 343 ಕೊಟಿ ಬಿಡುಗಡೆಯಾಗಿದೆ. ಅದೇ ರೀತಿ ಶೀಘ್ರ ಬರ ಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಸೇರಲಿದೆ. ಅದಕ್ಕೆ ಪೂರಕವಾಗಿ ಶೇ 100ರಷ್ಟು ರೈತರ ವಿವರ ಫ್ರೂಟ್ಸ್ ಐಡಿಗೆ ದಾಖಲಿಸುವ, ಕೆವೈಸಿ ನೋಂದಾಯಿಸುವ ಕಾರ್ಯ ಅಭಿಯಾನದ ಸ್ವರೂಪದಲ್ಲಿ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆಯಿಂದ 1.43 ಕೋಟಿ ರೈತರಿಗೆ 5388 ಕೋಟಿ ರೂ. ಸೌಲಭ್ಯ ತಲುಪಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಮೂಲಕ 75 ಸಾವಿರ ಕೋಟಿ ಆರ್ಥಿಕ ನೆರವು ರಾಜ್ಯದ ಜನ ಸಾಮಾನ್ಯರಿಗೆ ನೇರವಾಗಿ ತಲುಪುತ್ತಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.
ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಸೂಚನೆ: ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನ ಮಾಡುವುದು ಸೇರಿದಂತೆ ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಳ್ಳಾರಿ, ವಿಜಯನಗರ ರೈತರ ಫ್ರೂಟ್ಸ್ ಐಡಿ ನೋಂದಣಿ ಇನ್ನೊಂದು ವಾರದೊಳಗೆ ಪೂರ್ಣಗೊಳಿಸಬೇಕು. ಜಲಸಂರಕ್ಷಣೆ ಯೋಜನೆಗೆ ಆದ್ಯತೆ ನೀಡಿ ಸಿರಿಧಾನ್ಯ ಬೆಳೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ಬೆಳೆ ವಿಮಾ ನೋಂದಣಿ ಹೆಚ್ಚಿಸಲು ಸಲಹೆ: ಬಳ್ಳಾರಿ ಜಿಲ್ಲೆಯಲ್ಲಿ ಬೆಳೆ ವಿಮೆ ನೋಂದಣಿ ತುಂಬಾ ಕಡಿಮೆ ಇದೆ. ಇನ್ಮುಂದೆ ಬೆಳೆ ವಿಮೆ ಅನುಕೂಲತೆ ಬಗ್ಗೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ನೋಂದಣಿ ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ರಾಜ್ಯದಲ್ಲಿ ಈ ಬಾರಿ 200 ಕೋಟಿ ರೂ. ವೆಚ್ಚದಲ್ಲಿ 32,000 ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಗಳಲ್ಲಿ ರೈತರಿಗೆ ನಕಲಿ ಬೀಜ, ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಅದನ್ನು ತಡೆಗೆ ಜಿಲ್ಲೆಯ ಅಧಿಕಾರಿಗಳು ಕ್ರಮ ಗೊಳ್ಳಬೇಕು. ಕೃಷಿ ಆಧಾರಿತ ನವೋದ್ಯಮಕ್ಕೆ ಪ್ರೋತ್ಸಾಹ ಹಾಗೂ ಹಾರ್ವೆಸ್ಟ್ ಹಬ್ ಸ್ಥಾಪನೆಗೆ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ, ಕಂಪ್ಲಿ ಶಾಸಕ ಗಣೇಶ್, ಶಿರಗುಪ್ಪ ಶಾಸಕ ನಾಗರಾಜು, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂಓದಿ:5 ವರ್ಷ ಪಿಎಂಜಿಕೆವೈ ವಿಸ್ತರಣೆ, ಮಹಿಳಾ ಗುಂಪುಗಳಿಗೆ ಡ್ರೋನ್: ಕೇಂದ್ರ ಸಚಿವ ಸಂಪುಟ ಅನುಮೋದನೆ