ಕರ್ನಾಟಕ

karnataka

ETV Bharat / state

ಮರಿಯಮ್ಮನಹಳ್ಳಿಯಲ್ಲಿ ನೀರಿನ ಸಮಸ್ಯೆ: ಈ ವಿಷಯದಲ್ಲಿ ರಾಜಕಾರಣಿಗಳಿಂದ ರಾಜಕೀಯ - ಶಾಸಕ ಭೀಮಾನಾಯ್ಕ್

ಅದು ತುಂಗಭದ್ರಾ ನದಿ ಪಕ್ಕದಲ್ಲಿಯೇ ಇರುವ ಪಟ್ಟಣ. ವಿಪರ್ಯಾಸ ಅಂದ್ರೆ ಅಲ್ಲಿಗೆ ನದಿಯ ಮೂಲದಿಂದ ನೀರೇ ಸರಬರಾಜಾಗ್ತಿಲ್ಲ. ಇದೇ ವಿಚಾರ ಮುಂದಿಟ್ಟುಕೊಂಡು ಹಾಲಿ ಶಾಸಕರೊಬ್ಬರು ಮಾಜಿ ಶಾಸಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಇತರೇ ಪಕ್ಷದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಹಾಲಿ ಮತ್ತು ಮಾಜಿ ಶಾಸಕರಿಬ್ಬರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Drinking Water problem in Mariyammanahalli
ಮರಿಯಮ್ಮನಹಳ್ಳಿಯಲ್ಲಿ ನೀರಿನ ಸಮಸ್ಯೆ

By

Published : Aug 24, 2022, 3:29 PM IST

ವಿಜಯನಗರ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ್, ಅದೇ ಕ್ಷೇತ್ರದ ಮಾಜಿ ಶಾಸಕ ನೇಮಿರಾಜ ನಾಯ್ಕ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಮರಿಯಮ್ಮನಹಳ್ಳಿ ಹೋಬಳಿಯ ಬಹುಗ್ರಾಮ ಕುಡಿಯೋ ನೀರಿನ ಯೋಜನೆ ಸೇರಿದಂತೆ ವಿವಿಧ ಯೋಜನಗೆಳನ್ನು ನಾನು ತಂದಿದ್ದೇನೆ ಅಂತ ಮಾಜಿ ಶಾಸಕ ನೇಮಿರಾಜ ನಾಯ್ಕ್ ಹೇಳಿದ್ರಂತೆ. ಇದಕ್ಕೆ ಶಾಸಕ ಭೀಮಾನಾಯ್ಕ್​​ ಅವಾಚ್ಯ ಪದ ಬಳಸುವ ಮೂಲಕ ಉತ್ತರ ನೀಡಿದ್ದಾರೆ.

ಮರಿಯಮ್ಮನಹಳ್ಳಿ ಹೋಬಳಿಯ ಪದವಿ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಡಣನಾಯಕನಕೆರೆ ಏತ ನೀರಾವರಿ ಯೋಜನೆ ಶಾಸಕ ಅನಿಲ್ ಲಾಡ್ ಅಧಿಕಾರಾವಧಿಯಲ್ಲಿ ಆಗಿದೆ. ಆಗ ಹೆಚ್​ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ರು. ಅವರು ಮಾಡಿದ್ದ ಯೋಜನೆಗಳನ್ನು ನಾನು ಮಾಡಿದ್ದೀನಿ ಅಂತ ಹೇಳಿಕೊಂಡು ಓಡಾಡುವವರಿಗೆ, ಸ್ವಲ್ಪವಾದ್ರೂ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಭೀಮಾನಾಯ್ಕ್​​ ಪ್ರಶ್ನೆ ಮಾಡಿದ್ದಾರೆ.

ಮರಿಯಮ್ಮನಹಳ್ಳಿ ತಾಂಡದಲ್ಲಿ 60 ಲಕ್ಷ ರೂಪಾಯಿಯ ಒಂದು ಕಾಮಗಾರಿಯನ್ನೂ ಮಾಜಿ ಶಾಸಕ ನೇಮಿರಾಜ ನಾಯ್ಕ್ ಮಾಡಿಸಿಲ್ಲ. ಅಷ್ಟರಲ್ಲಿ ಇಂತಹ ಹೇಳಿಕೆ ಕೊಡೋದು ಎಷ್ಟು ಸರಿ ಎಂದು ಕೇಳಿದ್ದಾರೆ.

ಮರಿಯಮ್ಮನಹಳ್ಳಿಯಲ್ಲಿ ನೀರಿನ ಸಮಸ್ಯೆ

ಇದನ್ನೂ ಓದಿ: ಬಳ್ಳಾರಿ: ಕುಡಿಯುವ ನೀರಿನ ಸಮಸ್ಯೆ.. ಜನರಿಗೆ ತಪ್ಪುತ್ತಿಲ್ಲ ಪರದಾಟ

ಇನ್ನು, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್​ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ಲಾಲ್ಯಾನಾಯ್ಕ್, ಹಲವು ದಶಕಗಳಿಂದ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮಾಜಿ ಮತ್ತು ಹಾಲಿ ಶಾಸಕರು ಕೂಡ ನೀರಿನ ಸಮಸ್ಯೆಯನ್ನು ಜೀವಂತ ಇಟ್ಟಿದ್ದಾರೆ. ಇದೇ ವಿಷಯ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಮಾಜಿ ಮತ್ತು ಹಾಲಿ ಶಾಸಕರು15 ವರ್ಷಗಳನ್ನು ಕಳೆದಿದ್ದಾರೆ. ಚುನಾವಣೆ ಬಂದಾಗ ಕುಡಿಯುವ ನೀರಿನ ಸಮಸ್ಯೆಯನ್ನು ಮುನ್ನೆಲೆಗೆ ತರುತ್ತಾರೆ ಎಂದು ಕಿಡಿಕಾರಿದ್ದಾರೆ.

ಇವರಿಬ್ಬರಿಗೂ ಜನರ ಕಾಳಜಿಗಿಂತ ಅಧಿಕಾರ ಬೇಕು ಅಷ್ಟೆ. ಈಗಲಾದ್ರೂ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ನೀರು ಕೊಡದೇ ಇದ್ರೆ, ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಲಾಲ್ಯಾನಾಯ್ಕ್ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details