ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗೋಪಾಲಪುರ ಕ್ಯಾಂಪಿಗೆ ಲಿಕೇಜ್ ನೀರೇ ಕುಡಿಯಲಿಕ್ಕೆ ಆಸರೆಯಾಗಿದೆ.
ಹೌದು, ಬಳ್ಳಾರಿ ಮಹಾನಗರದಿಂದ ಸರಿ ಸುಮಾರು 35 ಕಿ.ಮೀ. ದೂರದಲ್ಲಿರುವ ಗೋಪಾಲಪುರ ಕ್ಯಾಂಪ್ನಲ್ಲಿ ಅಂದಾಜು 550ಕ್ಕೂ ಅಧಿಕ ಮನೆಗಳಿವೆ. ಆದ್ರೆ ಆ ಕ್ಯಾಂಪಿಗೆ ಸಮರ್ಪಕ ಕುಡಿಯೋ ನೀರಿನ ವ್ಯವಸ್ಥೆಯೇ ಇಲ್ಲ.
550ಕ್ಕೂ ಹೆಚ್ಚು ಮನೆಗಳಿರುವ ಪ್ರದೇಶಕ್ಕೆ ಲಿಕೇಜ್ ನೀರೇ ಕುಡಿಯಲಿಕ್ಕೆ ಆಸರೆ ಪ್ರತಿ ಬಾರಿ ಬೇಸಿಗೆ ಕಾಲ ಎದುರಾದ್ರೆ ಸಾಕಿಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ. ಬಿಂದಿಗೆಗಳನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಅನತಿ ದೂರದಲ್ಲಿರುವ ಲಿಕೇಜ್ ಟ್ಯಾಪ್ನಿಂದಲೇ ಕುಡಿಯುವ ನೀರು ತರುವ ಪರಿಸ್ಥಿತಿ ಎದುರಾಗಿದೆ. ಸಿಂಧವಾಳ ಗ್ರಾಮದಿಂದ ಸೋಮಸಮುದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಪೈಪ್ ಲೈನ್ನಲ್ಲಿ ಲಿಕೇಜ್ ಆಗುತ್ತಿದ್ದು, ಈ ಲಿಕೇಜ್ ನೀರೇ ಈಗ ಗೋಪಾಲಪುರ ಕ್ಯಾಂಪಿಗೆ ಜೀವ ಸಂಜೀವಿನಿಯಾಗಿದೆ.
ಇಂತಹ ಅವ್ಯವಸ್ಥೆ ಇದ್ದರೂ ಅಲ್ಲಿನ ಗ್ರಾಮ ಪಂಚಾಯಿತಿ ಆಗಲೀ ಅಥವಾ ಜಿಲ್ಲಾ ಪಂಚಾಯಿತಿ ಆಗಲೀ ಕಣ್ಮುಚ್ಚಿ ಕುಳಿತುಕೊಂಡಿರುವುದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ದಶಕ ಕಳೆದ್ರೂ ಕೂಡ ಕುಡಿಯುವ ನೀರಿನ ಬವಣೆ ಮಾತ್ರ ಇಲ್ಲಿ ನೀಗಿಲ್ಲ ಅನ್ನೋದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.