ಬಳ್ಳಾರಿ: ಬಳ್ಳಾರಿ ಮಹಾನಗರದ ಹೃದಯ ಭಾಗದಲ್ಲೇ ಒಳಚರಂಡಿ ನೀರಿನ ಕೋಡಿ ಹರಿದು ಬರುತ್ತಿದೆ. ಹೀಗಾಗಿ, ಎಲ್ಲಿದೆ 'ಸ್ವಚ್ಛ ಬಳ್ಳಾರಿ- ಸ್ವಾಸ್ಥ್ಯ ಬಳ್ಳಾರಿ' ಎಂಬ ಪ್ರಶ್ನೆಯೊಂದು ಸಾರ್ವಜನಿಕರನ್ನ ಕಾಡಲಾರಂಭಿಸಿದೆ.
ಮಹಾನಗರ ಪಾಲಿಕೆ ಮುಂದೆ ಕೊಳಚೆ ನೀರು.. ಅಯ್ಯೋ ಶಿವ್ನೇ.. ಮಹಾನಗರ ಪಾಲಿಕೆ ಕಚೇರಿ ಎದುರೇ ಭಾರೀ ಪ್ರಮಾಣದ ಒಳಚರಂಡಿ ನೀರು ರಸ್ತೆಗೆ ಹರಿದುಬಂದರೂ ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರವರ್ಗ ಮಾತ್ರ ಕಣ್ಮುಚ್ಚಿ ಕುಳಿತಿರೋದು ವಿಪರ್ಯಾಸ. ನಗರದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುವುದಕ್ಕೆ ಇದು ಸಾಕ್ಷಿ.
ಈ ಬಾರಿ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಬಳ್ಳಾರಿಯನ್ನ ಸ್ಮಾರ್ಟ್ ಸಿಟಿಯನ್ನಾಗಿ ಘೋಷಿಸಬೇಕಿತ್ತು. ಈ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದರಿಂದ್ಲೇ ಸ್ಮಾರ್ಟ್ ಸಿಟಿ ಘೋಷಣೆ ಮುಂದೂಡಲಾಗಿದೆ ಎನ್ನಲಾಗ್ತಿದೆ. ಸ್ವತಃ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರೇ ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದಾರೆ.
ಅದಕ್ಕೆ ಪೂರಕವಾಗಿಯೇ ನಗರದ ಹೃದಯ ಭಾಗ ಗಡಿಗಿ ಚನ್ನಪ್ಪ ವೃತ್ತದ ರಸ್ತೆ ಒಳಚರಂಡಿ ನೀರಿನಿಂದ ತುಂಬಿದೆ. ಅದರ ದುರ್ವಾಸನೆ ಜನರ ಮೂಗಿಗೆ ರಾಚುತ್ತದೆ. ಈ ಹಾದಿಯಲ್ಲೇ ಮೇಲಾಧಿಕಾರಿಗಳಿರುವ ವಾಹನಗಳು ಸಂಚರಿಸಿದ್ರೂ ತಮಗೆ ಕಂಡರೂ ಕಾಣದಂತಿದ್ದಾರೆ.
ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು, ಲಿಖಿತ ರೂಪದ ದೂರುಗಳಿಗೆ ಸ್ಪಂದಿಸ್ತಿಲ್ಲ. ಈ ಕೊಳಚೆ ನೀರು ಹರಿಯೋದರ ಬಗ್ಗೆ ಏನ್ ಕ್ರಮಕೈಗೊಳ್ಳೋದಕ್ಕೆ ಸಾಧ್ಯ ಅಂತಾ ಸ್ಥಳೀಯರು ಪ್ರಶ್ನಿಸ್ತಿದ್ದಾರೆ.