ಬಳ್ಳಾರಿ: ಇಲ್ಲಿನ ಗಣೇಶ ಕಾಲೋನಿಯ ಹತ್ತಾರು ಮನೆಗಳಲ್ಲಿ ಒಳಚರಂಡಿಯ ನೀರು ನುಗ್ಗಿರುವ ಮಾಹಿತಿ ಪಡೆದ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಬೆಳ್ಳಂಬೆಳಗ್ಗೆಯೇ ಸ್ಥಳಕ್ಕಾಗಮಿಸಿ ಶುಚಿಗೊಳಿಸಿದ್ದಾರೆ. ಶಾಸಕರ ಕಾರ್ಯಕ್ಕೆ ಕಾಲೋನಿಯ ನಿವಾಸಿಗಳು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಳಚರಂಡಿಯ ಪೈಪ್ಲೈನ್ ಒಡೆದು ಅಲ್ಲಿನ ತಗ್ಗು ಪ್ರದೇಶದ ಮನೆಗಳಲ್ಲಿ ಜಲಾವೃತಗೊಂಡಿತ್ತು. ಕೆಲವರು ಅದೇ ಬೀದಿಯಲ್ಲಿ ಓಡಾಡುತ್ತಿದ್ದರು. ಈ ದೃಶ್ಯವನ್ನು ಕಂಡ ಶಾಸಕರು, ಮಮ್ಮಲ ಮರುಗಿದ್ದಾರೆ. ಅಲ್ಲದೆ ಕುಪಿತಗೊಂಡ ಶಾಸಕ ರೆಡ್ಡಿ, ಪಾಲಿಕೆ ಆಯುಕ್ತೆಗೆ ಕ್ಲಾಸ್ ಸಹ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.
ಜಲಾವೃತ ಆದ ಮನೆಯ ಕಟ್ಟೆಯ ಮೇಲೆ ಕುಳಿತ ರೆಡ್ಡಿ:
ಒಳಚರಂಡಿ ಜಲಾವೃತಗೊಂಡ ಮನೆಯ ಮುಂಭಾಗದ ಕಟ್ಟೆಯ ಮೇಲೆ ಕುಳಿತಕೊಂಡ ಶಾಸಕ ರೆಡ್ಡಿ, ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಶುಚಿತ್ವ ಕಾರ್ಯವನ್ನು ವೀಕ್ಷಣೆ ಮಾಡಿದ್ದಾರೆ. ಕ್ಲಾಸ್ ತೆಗೆದುಕೊಂಡ ಹಿನ್ನೆಲೆ ಆಯುಕ್ತೆ ತುಷಾರಮಣಿ ಸಹ ವಾಹನಗಳನ್ನು ತರಿಸಿ ಕ್ಲೀನ್ ಮಾಡಲು ಮುಂದಾದರು.
ಒಳಚರಂಡಿಯ ನೀರು ನುಗ್ಗಿರುವ ದೃಶ್ಯ ಈ ವೇಳೆ ಮಾತನಾಡಿದ ಸೋಮಶೇಖರ ರೆಡ್ಡಿ, ಒಳಚರಂಡಿಯ ನೀರು ಮನೆಗೆ ನುಗ್ಗಲು ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
ಒಳಚರಂಡಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. 1978ರಲ್ಲಿ ನಿರ್ಮಾಣ ಮಾಡಿದ ಒಳಚರಂಡಿ ವ್ಯವಸ್ಥೆ ಇದು. ಈವರೆಗೂ ಯಾವುದೇ ಅಪ್ಗ್ರೇಡ್ ಮಾಡಿಲ್ಲ. ಜನಸಂಖ್ಯಾವಾರು ಒಳಚರಂಡಿ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದ್ದಾರೆ. ಅಮೃತ ಯೋಜನೆ ಅಡಿಯಲ್ಲಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡುವೆ. ಮುಖ್ಯಮಂತ್ರಿಗಳಿಂದ ಹೆಚ್ಚುವರಿ ಅನುದಾನ ತರುವೆ. ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವೆ. ಚರಂಡಿ ನೀರನ್ನು ಸ್ವಚ್ಛ ಮಾಡಲಾಗುತ್ತಿದೆ. ಸಂಪೂರ್ಣ ಕ್ಲೀನ್ ಆಗೋವರೆಗೂ ಸ್ಥಳ ಬಿಟ್ಟು ಹೋಗೋಲ್ಲ ಎಂದಿದ್ದಾರೆ.