ಬಳ್ಳಾರಿ: ವಿಮ್ಸ್ನಲ್ಲಿ ಆದ ದುರ್ಘಟನೆಗಳ ಕುರಿತು ತಡವಾಗಿಯಾದರೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಎಚ್ಚೆತ್ತುಕೊಂಡಿದ್ದಾರೆ. ಇಂದು ವಿಮ್ಸ್ ಗೆ ಭೇಟಿ ನೀಡಿದ ಅವರು, ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದಿದ್ದಾರೆ. ಆದ್ರೆ ಇಂದೂ ಸಹ ವಿಮ್ಸ್ ನಿರ್ಲಕ್ಷ್ಯತನಕ್ಕೆ ಕೈಗನ್ನಡಿ ಹಿಡಿಯುವಂತ ಘಟನೆಯೊಂದು ನಡೆದಿದ್ದು, ಒಂದೆಡೆ ಸಚಿವರ ಸಭೆ, ಮತ್ತೊಂದೆಡೆ ವಿಮ್ಸ್ ನ ಬೇಜವಾಬ್ದಾರಿ ವರ್ತನೆ ಎರಡೂ ಮುಂದುವರೆದಿತ್ತು.
ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಬಳ್ಳಾರಿ ವಿಮ್ಸ್ ನದ್ದೇ ಸುದ್ದಿ. ಇಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಇಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ವಿಮ್ಸ್ ಗೆ ಭೇಟಿ ನೀಡಿದ್ರು. ಬರ್ತಿದ್ದ ಹಾಗೆ ನೇರವಾಗಿ ವಿಮ್ಸ್ ಮೀಟಿಂಗ್ ಹಾಲ್ಗೆ ತೆರಳಿದ ಅವರು, ಅಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು. ನಡೆದಿರುವ ದುರಂತದ ಬಗ್ಗೆ ಸಮಗ್ರ ಮಾಹಿತಿ ಪಡೆದ್ರು.
ಸುಧಾಕರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸಾಥ್ ನೀಡಿದ್ರು. ಸಭೆ ವೇಳೆ ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, ಡಿಸಿ ಪವನಕುಮಾರ್ ಮಾಲಪಾಟಿ ಸೇರಿದಂತೆ ಹಲವರಿಗೆ ಸಚಿವ ಸುಧಾಕರ್ ಕ್ಲಾಸ್ ತೆಗೆದುಕೊಂಡ್ರು ಎನ್ನುವ ಮಾತುಗಳು ಕೇಳಿಬಂದಿವೆ. ಒಂದೆಡೆ ಸಚಿವರ ಸಭೆ ನಡೀತಿದ್ರೆ, ಮತ್ತೊಂದೆಡೆ ಇಂದೂ ಸಹ ವಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯತನ ಮುಂದುವರೆದಿತ್ತು. ಕಳೆದ ಮೂರು ದಿನಗಳಿಂದ ಚಿಕಿತ್ಸೆಗಾಗಿ ಅಸ್ವಸ್ಥನೊಬ್ಬ ಒದ್ದಾಡ್ತಿದ್ರೂ ವಿಮ್ಸ್ ಸಿಬ್ಬಂದಿ ಕ್ಯಾರೇ ಎಂದಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಯಾವಾಗ ಮಾಧ್ಯಮಗಳ ಕ್ಯಾಮರಾಗಳು ಆತನನ್ನು ಶೂಟ್ ಮಾಡಲು ಶುರು ಮಾಡಿದ್ವೋ ಇದ್ದಕ್ಕಿದ್ದ ಹಾಗೆ ವಿಮ್ಸ್ ಸಿಬ್ಬಂದಿಗೆ ಜ್ಞಾನೋದಯವಾಗಿ ಅಸ್ವಸ್ಥನನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ಪ್ರಾರಂಭ ಮಾಡಿದ್ರು. ಒಂದೆಡೆ ಇಲಾಖೆ ಸಚಿವರ ಸಭೆ, ಮತ್ತೊಂದೆಡೆ ವಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ಇದು ವಿಮ್ಸ್ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿತ್ತು.
ಎರಡು ಸಾವು ಬಗ್ಗೆ ವರದಿ: ಇನ್ನು ಸಭೆ ಬಳಿಕ ಡಾ. ಕೆ ಸುಧಾಕರ್ ಕೇಬಲ್ ಬ್ಲಾಸ್ಟ್ ಆಗಿದ್ದ ಸ್ಥಳ ನೋಡಿದ್ರು. ಹಾಗೆಯೇ ಸಮಸ್ಯೆ ಉಂಟಾಗಿದ್ದ ಐಸಿಯುಗೂ ತೆರಳಿ ಸ್ಥಳ ಪರಿಶೀಲನೆ ಜೊತೆ ವಾಸ್ತವ ಪರಿಸ್ಥಿತಿಯ ಪರಿಶೀಲನೆ ಮಾಡಿದ್ರು. ನಂತರ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ರು. ಅದರಲ್ಲಿಯೂ ಸಹ ಅವರು ಸರ್ಕಾರದ್ದು ಯಾವುದೇ ಬಗೆಯ ತಪ್ಪಿಲ್ಲ. ಮೃತಪಟ್ಟಿರೋದು ಇಬ್ಬರೇ ಎನ್ನುವ ದಾಟಿಯಲ್ಲಿ ಮಾತನಾಡಿದ್ರು. ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆಯಲ್ಲಿ ಎರಡು ಸಾವು ಬಗ್ಗೆ ವರದಿಯಾಗಿದೆ.