ಬಳ್ಳಾರಿ: ದೇಹದಿಂದ ಬೇರ್ಪಟ್ಟ ಕೈಗಳನ್ನು ಎಳೆದಾಡಿದ ನಾಯಿಗಳು! - ಬಳ್ಳಾರಿ ಅಪರಾಧ ಸುದ್ದಿ
ಬಳ್ಳಾರಿ ನಗರದ ಕೌಲ್‌ಬಜಾರ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ದೇಹದಿಂದ ತುಂಡಾಗಿದ್ದ ಕೈಯನ್ನು ನಾಯಿಗಳು ಎಳೆದಾಡಿದ ಘಟನೆ ನಡೆದಿದೆ.
ಬಳ್ಳಾರಿ: ವ್ಯಕ್ತಿಯೊಬ್ಬರ ದೇಹದಿಂದ ತುಂಡಾಗಿದ್ದ ಕೈಯನ್ನು ನಾಯಿಗಳು ಎಳೆದಾಡಿದ ಘಟನೆ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಬಳ್ಳಾರಿ ನಗರದ ಕೌಲ್‌ಬಜಾರ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಘಟನೆಯ ವಿವರ: ಗುಗ್ಗರಪ್ರದೇಶ ನಿವಾಸಿ ದಸ್ತಗಿರ್ ಅಹ್ಮದ್ ಎಂಬವರು ಗುಗ್ಗರಹಟ್ಟಿಯ ಮುನ್ನಾಪ್ಲಾಟ್ ಸಮೀಪದಲ್ಲಿ ಜನವರಿ 21ರಂದು ರಾತ್ರಿ ರೈಲಿನ ಹಳಿಗೆ ಬಿದ್ದು ಕೈ ತುಂಡಾಗಿತ್ತು. ಇದು ಆತ್ಮಹತ್ಯೆ ಯತ್ನವೋ, ಅಪಘಾತವೋ ತಿಳಿದು ಬಂದಿಲ್ಲ. ಆನಂತರ ತುಂಡಾಗಿದ್ದ ಕೈ ಸಮೇತ ದಸ್ತಗಿರ್ ಅವರನ್ನು ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಪರಿಶೀಲಿಸಿ, ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಿಸಲು ಸಾಧ್ಯವಿಲ್ಲ ಎಂದು ಮರುದಿನ ಬೆಳಗ್ಗೆ ಖಚಿತಪಡಿಸಿದ್ದರು. ಜನವರಿ 22ರಂದು ಕೈ ಜೋಡಿಸಲು ಆಗದಿರುವ ಬಗ್ಗೆ ತಿಳಿದುಕೊಂಡ ಬಳಿಕ, ವೈದ್ಯರು ಹೇಳಿದಂತೆ ದಸ್ತಗಿರ್ ಅವರ ಸಹೋದರನಿಗೆ ಕೈ ಸ್ಮಶಾನದದಲ್ಲಿ ಹೂಳುವಂತೆ ತಿಳಿಸಿದ್ದರು. ಈ ವಿಚಾರವನ್ನು ಅವರ ಚಾಲಕನಿಗೆ ತಿಳಿಸಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಚಾಲಕ ಸ್ಮಶಾನಕ್ಕೆ ಹೋಗಿ ಹೂಳದೇ, ಪಕ್ಕದಲ್ಲೇ ಇರುವ ರಾಜಕಾಲುವೆಯಲ್ಲಿ ಬಿಸಾಡಿದ್ದರು. ಮೂರು ದಿನಗಳ ನಂತರ ಕೈ ವಾಸನೆ ಬರಲು ಶುರುವಾಗಿದ್ದು, ನಾಯಿಗಳು ಎಳೆದಾಡಿವೆ. ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.