ಬಳ್ಳಾರಿ:ಕೇವಲ ಸಬ್ಸಿಡಿ ಆಸೆಗಾಗಿ ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯ ಪಡೆಯೋದು ಬೇಡ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಫಲಾನುಭವಿಗಳಿಗೆ ತಾಕೀತು ಮಾಡಿದ್ದಾರೆ.
ಬಳ್ಳಾರಿ ನಗರದ ಗ್ರಾಮೀಣ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳಾ ಅಭಿವೃದ್ಧಿ ನಿಗಮದಡಿ ವಿವಿಧ ಯೋಜನೆಗಳಡಿ ಪಡೆದುಕೊಳ್ಳುವ ಸಾಲ ಸೌಲಭ್ಯವನ್ನು ತಾವೆಲ್ಲರೂ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಅಭ್ಯುದಯ ಸಾಧಿಸಬೇಕು. ಈ ಸಮಾಜದಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವ ಸ್ವಭಾವ ದೂರವಾಗಬೇಕಿದೆ. ಈ ನಿಟ್ಟಿನಲ್ಲಿ ಹೆಣ್ಣು ತಲೆ ಎತ್ತಿ ಎಲ್ಲರಂತೆ ಬಾಳಲು ನಿಗಮದಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಶ್ರಮಿಸಲಾಗುತ್ತಿದೆ ಎಂದರು.