ಬಳ್ಳಾರಿ:ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾಡು ಮೇಡು ಗುಡ್ಡಬೆಟ್ಟ ಪ್ರದೇಶಗಳಲ್ಲಿ ಜೀವದ ಹಂಗನ್ನು ತೊರೆದು ಅರಣ್ಯ ಮತ್ತು ವನ್ಯಜೀವಿಗಳ ಸಂಪತ್ತಿನ ಉಳುವಿಗಾಗಿ ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇವರುಗಳಿಗೆ ಎಲ್ಲರು ಒತ್ತಾಸೆಯಾಗಿ ನಿಂತು ಧೈರ್ಯ ಮತ್ತು ಸಹಕಾರವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾದೀಶರಾದ ಪಿ.ಟಿ.ಕಟ್ಟಿಮನಿ ಅವರು ಮಾತನಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ದುರ್ಗಮವಾದ ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಿರುವುದನ್ನು ನಾನು ಖುದ್ದು ಅರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಮನಿಸಿರುತ್ತೇನೆ ಎಂದರು. ಇವರಿಗೆ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದು ಹೇಳಿದ ಅವರು, ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ತುಂಬು ಹೃದಯದಿಂದ ಶ್ಲಾಘಿಸಿದರು.