ಬಳ್ಳಾರಿ :ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪರಿಣಾಮಕಾರಿಯಾದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಪಂ ಸಿಇಒ ಕೆ.ಆರ್. ನಂದಿನಿ ಹೇಳಿದರು.
ಜಿಲ್ಲಾಡಳಿತ, ಜಿಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ರಾಮಯ್ಯ ಕಾಲೋನಿಯ ನಗರ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಮತ್ತು ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮನೆ ಮನೆಗಳಿಗೆ ಹೋಗುವ ಮೂಲಕ 8.43 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳು ಹಾಗೂ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಹುಟ್ಟಿನಿಂದ 05 ವರ್ಷದೊಳಗಿನ ಒಟ್ಟು 3.16 ಲಕ್ಷ ಮಕ್ಕಳಿಗೆ ಓಆರ್‌ಎಸ್ ಪೊಟ್ಟಣಗಳನ್ನು ವಿತರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮವನ್ನು ಇಂದಿನಿಂದ ಸೆ.21ರವರೆಗೆ ಹಮ್ಮಿಕೊಳ್ಳಲಾಗಿದ್ದು ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯ ನಡೆಯಲಿದೆ. 2067 ಆಶಾ ಕಾರ್ಯಕರ್ತೆಯರು ಹಾಗೂ 2723 ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಜಂತುಹುಳು ನಿವಾರಣ ಆಲ್ಬಂಡೋಜೋಲ್ ಮಾತ್ರೆಗಳನ್ನು1 ರಿಂದ 19 ವರ್ಷ ವಯಸ್ಸಿನ ಮಕ್ಕಳಿಗೆ ಮತ್ತು ಹುಟ್ಟಿನಿಂದ 05 ವರ್ಷದೊಳಗಿನ ಮಕ್ಕಳಿಗೆ ಓಆರ್‌ಎಸ್ ಪೊಟ್ಟಣಗಳನ್ನು ವಿತರಿಸಲಿದ್ದಾರೆ ಎಂದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಆರ್. ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್. ದಾಸಪ್ಪನವರ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗುರುನಾಥ್ ಚವ್ಹಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ರಾಜಶೇಖರ ರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಆರ್ ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ, ರಾಮಯ್ಯ ಕಾಲೋನಿಯ ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ರಾಜಶೇಖರ್, ಸಿ.ಡಿ.ಪಿ.ಒ ಜಲಾಲಪ್ಪ, ಡಿ.ಎನ್.ಒ ಸರೋಜ, ಆರ್.ಕೆ.ಎಸ್.ಕೆ ಮನೋಹರ್, ರಾಘವೇಂದ್ರ, ಮದನ್ ಕುಮಾರ್ ಆನಂದ್, ಗುಲಾಮ್ ನೂರ್ ಅಹ್ಮದ್, ಮೇಘರಾಜ್, ಕಿರಣ ಕುಮಾರ್, ಜ್ಯೋತಿ ಲಕ್ಷ್ಮೀ ಸೇರಿದಂತೆ ಅಂಗನವಾಡಿ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ತಾಯಂದಿರು ಇದ್ದರು.