ಬಳ್ಳಾರಿ:ಲಾಕ್ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿರುವ ಬಿಜೆಪಿ ಮುಖಂಡರಾದ ಬಿ.ಜಗದೀಶ ಹಾಗೂ ಮಾರೆಣ್ಣ ಮನೆಯ ಮುಂಭಾಗದಲ್ಲಿಂದು ಬಡ ಹಾಗೂ ಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರೋಗ್ಯ ಸಚಿವರಿಂದ ರೇಷನ್ ಕಿಟ್ ವಿತರಣೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬೆಳಿಗ್ಗೆ 10 ಗಂಟೆಗೆ ಬಡ ಹಾಗೂ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮವನ್ನ ಆಯೋಜಿಸಿದ್ದರಿಂದ ನೂರಾರು ಮಹಿಳೆಯರು, ವೃದ್ಧರು ಬೆಳಿಗ್ಗೆ 9 ಗಂಟೆಗೆ ಎರಡು ಸಾಲುಗಳಲ್ಲಿ ನಿಂತು ಕಾಯುತ್ತಾ ಕುಳಿತಿದ್ದರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಕಾದು ಕುಳಿತಿದ್ದರು. ಆ ಬಳಿಕ ಸ್ಥಳಕ್ಕಾಗಮಿಸಿದ ಸಚಿವ ಶ್ರೀರಾಮುಲು ದಿನಸಿ ಕಿಟ್ಗಳನ್ನು ಹಂಚಿಕೆ ಮಾಡಿದ್ರು.
ಇದಕ್ಕೂ ಮುಂಚೆ ಬಿರು ಬಿಸಿಲಿನ ಝಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ನಿಂತಿದ್ದ ಸಾರ್ವಜನಿಕರು ಬೆಳಿಗ್ಗೆಯಿಂದಲೇ ನಿಂತು ಸುಸ್ತಾಗಿದ್ದರು. ಕೆಲವರು ಗಿಡಮರಗಳ ಕೆಳಗಡೆ ಗುಂಪು ಗುಂಪಾಗಿ ಸೇರಿಕೊಂಡಿದ್ದರು. ಆಯೋಜಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಾಕೀತು ಮಾಡಿದ್ರು. ಇದಕ್ಕೆ ಮಹಿಳೆಯರು ಎಷ್ಟೊತ್ತು ಕಾಯಬೇಕು. ಬಿಸಿಲಿನ ಝಳ ನೆತ್ತಿ ಸುಡ್ತಿದೆ. ಯಾವಾಗ ಕಿಟ್ ವಿತರಿಸುತ್ತೀರಿ ಅಂತ ಗೊಣಗುತ್ತಲೇ ಸಚಿವ ಶ್ರೀರಾಮುಲುಗೆ ಹಿಡಿಶಾಪ ಹಾಕಿದ್ರು.
ರಾರಾಜಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾವಚಿತ್ರ: ಬಡ ಮತ್ತು ಕೂಲಿ ಕಾರ್ಮಿಕರಿಗೆ ವಿತರಿಸುವ ದಿನಸಿ ಕಿಟ್ಗಳ ಮೇಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಹಾಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ ಸೋಮಶೇಖ ರರೆಡ್ಡಿಯವರ ಭಾವಚಿತ್ರಗಳನ್ನ ಕೆಂಪು ಬಣ್ಣದದಲ್ಲಿ ಮುದ್ರಿಸಲಾಗಿತ್ತು. ಅದು ನೋಡುಗರ ಗಮನ ಸೆಳೆಯಿತು.
ಲಾಕ್ಡೌನ್ ಸಡಿಲಿಕೆ ವಿಚಾರ ಕಾದು ನೋಡೋಣ: ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಯಿತು. ಸಿಎಂ ಬಿಎಸ್ ಯಡಿಯೂರಪ್ಪನವ್ರು, ಮೇ. 3ರವರೆಗೆ ಕಾದು ನೋಡೋಣ. ಆ ಬಳಿಕ ಸಡಿಲಿಕೆ ವಿಚಾರದ ಕುರಿತು ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರೋಣ ಎಂದಿದ್ದಾರೆ. ಅಲ್ಲಿಯವರೆಗೂ ಕಾದು ನೋಡೋಣ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ರು.