ಬಳ್ಳಾರಿ: ರಾಜ್ಯದ 15 ವಿಧಾನಸಭಾ ಕ್ಷೇತ್ರದಲ್ಲಿ ಎದುರಾದ ಉಪಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನ ಪಡೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿರುವುದು... ಜಿಲ್ಲೆಯ ಹರಪನಹಳ್ಳಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಬಿಜೆಪಿಯ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಈ ಅಯೋಗ್ಯ ಶಾಸಕರನ್ನು ಸೋಲಿಸೋದೇ ನಮ್ಮ ಗುರಿಯಾಗಿದ್ದು, ಉಪಚುನಾವಣೆಯಲಿ ಬಿಜೆಪಿ ಪಕ್ಷ ಮೂರನೇ ಸ್ಥಾನದಲ್ಲಿ ಇರಲಿದೆ ಎಂದರು.
ಉಪಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಯಡಿಯೂರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ಶಾಸಕರನ್ನು ಖರೀದಿಸಲು ಮುಂದಾರೆ ರಾಜ್ಯದ ಜನರು ದಂಗೆ ಏಳಲಿದ್ದಾರೆ. ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಉಪಚುನಾವಣೆ ಬಳಿಕ ಪತನವಾಗಲಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಹುಮತವಿಲ್ಲದ ಕೃತಕ ಸರ್ಕಾರ ಎಂದು ಅವರು ಹೇಳಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 10 ರಿಂದ 12 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಪ್ರಜಾಪ್ರಭುತ್ವ ವಿರೋಧ ಹೊಂದಿರುವ ಅಲ್ಪ ಬಹುಮತದ ಸರ್ಕಾರ ಬಿದ್ದು ಹೋಗಲಿದೆ.ಕೆಪಿಸಿಸಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ನಾಯಕರು ಉಪಚುನಾವಣಾ ಪ್ರಚಾರದಲ್ಲಿ ಭಾಗವಹಿಸಿಲ್ಲ ಎಂಬುವುದು ಶುದ್ಧ ಸುಳ್ಳು. ನಾಯಕರಿಗೆ ಕ್ಷೇತ್ರಗಳ ಉಸ್ತುವಾರಿ ಹಂಚಿಕೆ ಮಾಡಿರುವುದರಿಂದ ಆಯಾ ಕ್ಷೇತ್ರಗಳ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪಕ್ಷದ ಯಾವುದೇ ನಾಯಕರಲ್ಲಿ ಭಿನ್ನಮತವಿಲ್ಲ, ಎಲ್ಲರೂ ಒಗ್ಗಟ್ಟಿನಿಂದಿದ್ದು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ. ಯಾವುದೇ ಬಣಗಳಿಲ್ಲ ಎಂದರು.
ಪ್ರಚಂಚದ ಅನೇಕ ಮುಂದುವರೆದ ರಾಷ್ಟ್ರಗಳು ಇವಿಎಂ ಯಂತ್ರ ಬಳಕೆಯನ್ನು ನಿಷೇಧ ಮಾಡಿವೆ. ಇವಿಎಂ ಮತಯಂತ್ರ ದುರ್ಬಳಕೆ ಮಾಡಿಕೊಳ್ಳಲು ಅನೇಕ ವಿಧಾನಗಳಿದ್ದು, ಅದು ನಂಬಿಕೆಗೆ ಅರ್ಹವಾಗಿಲ್ಲ. ಮರಳಿ ಮತಪತ್ರಕ್ಕೆ ಮರಳಬೇಕಿದೆ. ಈ ಕುರಿತು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಚಂದ್ರಶೇಖರ ಭಟ್, ಜಿಲ್ಲಾ ಕಾಂಗ್ರೆಸ್ ಸಮಿತಿ (ಗ್ರಾಮಾಂತರ) ಅಧ್ಯಕ್ಷ ಬಿ.ವಿ.ಶಿವಯೋಗಿ ಇದ್ದರು.