ಬಳ್ಳಾರಿ:ಶ್ರಾವಣ ಮಾಸದ ಮೊದಲನೇಯ ಸೋಮವಾರದ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇ ಕೋಟೆ ವೀರಭದ್ರೇಶ್ವರ ದೇಗುಲಕ್ಕಿಂದು ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಹಳೇ ಕೋಟೆ ವೀರಭದ್ರೇಶ್ವರ ದೇಗುಲದ ಆವರಣದಲ್ಲೇ ಭಾನುವಾರದ ರಾತ್ರಿ ಕಳೆದ ನೂರಾರು ಭಕ್ತರು, ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಎದ್ದು, ಮಡೆಸ್ನಾನ ಪೂರೈಸಿ ಕುಟುಂಬ ಸದಸ್ಯರ ಹೆಸರಲ್ಲಿ ರುದ್ರಾಭಿಷೇಕ ನೆರವೇರಿಸಿದರು.
ಓಂ ನಮಃ ಶಿವಾಯ ಮಂತ್ರ ಜಪ:
ಹಾಲು, ಮೊಸರು, ತುಪ್ಪ ಮಿಶ್ರಿತ ನೀರಿನಿಂದ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಿದ ಭಕ್ತರು, ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿದರು. ನೆರೆಯ ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ ಹಾಗೂ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ರಾಯಚೂರು, ಕೊಪ್ಪಳ ಜಿಲ್ಲೆಯ ನಾನಾ ಗ್ರಾಮಗಳಿಂದ ಬಂದ ನೂರಾರು ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದರು.
ವೀರಭದ್ರೇಶ್ವರ ಸ್ವಾಮಿಯ ದೇಗುಲದಲ್ಲಿ ವಿಶೇಷ ಪೂಜೆ ಮೂರನೇ ಸೋಮವಾರ ವಿಶೇಷ ಅಲಂಕಾರ:
ಶ್ರಾವಣ ಮಾಸದ ಮೂರನೇಯ ಸೋಮವಾರದಂದು ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಆಭರಣಗಳ ಅಲಂಕಾರ ಇರಲಿದೆ ಎಂದು ದೇವಸ್ಥಾನ ಅರ್ಚಕರಾದ ಎಸ್.ವೀರಭದ್ರಯ್ಯ ಸ್ವಾಮಿ ತಿಳಿಸಿದ್ದಾರೆ. ಆ ದಿನದಂದು ತಾಲೂಕಿನ ಯರಕಲ್ಲು ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಗಂಗೆ ಸ್ನಾನ ಮಾಡಿಕೊಂಡು ವೀರಭದ್ರ ದೇವರ ಒಡಪು ಹೇಳಿಕೊಂಡೇ ಹಳೇಕೋಟೆ ಗ್ರಾಮಕ್ಕೆ ವೀರಭದ್ರೇಶ್ವರ ಮೂರ್ತಿಯನ್ನು ತರಲಾಗುವುದು. ಯರಕಲ್ಲು ಮತ್ತು ಹಳೇಕೋಟೆ ಗ್ರಾಮದ ರಾಜಬೀದಿಯಲ್ಲಿ ವೀರಭದ್ರ ದೇವರ ಮೂರ್ತಿಯ ಮೆರವಣಿಗೆ ನಡೆಸಲಾಗುವು ಎಂದರು.