ಹೊಸಪೇಟೆ:ಸಾಮಾಜಿಕ ಪಿಡುಗಾದ ದೇವದಾಸಿ ಪದ್ಧತಿ ಹೊಸಪೇಟೆ ಭಾಗದ ಹಳ್ಳಿಗಳಲ್ಲಿ ಇನ್ನು ಜೀವಂತವಾಗಿದೆ. ಕಳೆದ ಆರು ವರ್ಷಗಳಲ್ಲಿ 26 ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು ದೇವದಾಸಿ ಪದ್ಧತಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರ ಕ್ಷೇತ್ರದಲ್ಲಿ ದೇವದಾಸಿ ಪದ್ಧತಿ ಜೀವಂತ ಇರುವುದು ಖೇದಕರ ಸಂಗತಿಯಾಗಿದೆ. 18 ರಿಂದ 20 ವರ್ಷದ ಒಳಗಿನ ಹೆಣ್ಣು ಮಕ್ಕಳು ಈ ಸಾಮಾಜಿಕ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಸಖಿ ಟ್ರಸ್ಟ್ನಿಂದ ಒಂದು ವರ್ಷದಲ್ಲಿ ಮೂರು ದೇವದಾಸಿ ಪದ್ಧತಿಗೆ ಒಳಪಡುವ ಹಣ್ಣು ಮಕ್ಕಳನ್ನು ಪೊಲೀಸ್ ಇಲಾಖೆ ಮೂಲಕ ಸಂರಕ್ಷಣೆ ಮಾಡಲಾಗಿದೆ.
ರಾತ್ರೋ ರಾತ್ರಿ ನಡೆಯುತ್ತೆ ದೇವದಾಸಿ ಪದ್ಧತಿ:
ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ಹೆಣ್ಣು ಮಕ್ಕಳನ್ನು ದೇವದಾಸಿಯನ್ನಾಗಿ ಮಾಡಲಾಗುತ್ತದೆ. ಹೆಣ್ಣು ದೇವರ ಹೆಸರಿನಲ್ಲಿ ದೇವದಾಸಿ ಪದ್ಧತಿಗೆ ಹೆಣ್ಣು ಮಕ್ಕಳನ್ನು ದೂಡಲಾಗುತ್ತಿದೆ. ಈ ಮುಂಚೆ ದೇವಸ್ಥಾನಗಳಲ್ಲಿ ಈ ಪದ್ಧತಿಯನ್ನು ಮಾಡಲಾಗುತ್ತಿತ್ತು. ಆದರೆ, ಈಗ ಮನೆಯಲ್ಲಿ ಸಹ ಮಾಡಲಾಗುತ್ತಿದೆ.
ಅಪನಂಬಿಕೆ ಸೃಷ್ಟಿಸುವುದು:
ದೇವದಾಸಿಯನ್ನಾಗಿ ಮಾಡದಿದ್ದರೇ ದೇವರ ಕಾಟ ಇರುತ್ತದೆ ಎಂದು ಅಂಜಿಸುವುದು. ಸಮುದಾಯದ ಮಟ್ಟದ ಜನರು ನೋಡಲು ಚೆನ್ನಾಗಿ ಇರುವ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಪದ್ಧತಿಗೆ ದೂಡುತ್ತಾರೆ. ಅಲ್ಲದೇ, ಈ ಪದ್ಧತಿ ಇನ್ನು ಜೀವಂತವಾಗಿರಲು ಅನಕ್ಷರಸ್ಥರು ಮೂಲ ಕಾರಣವಾಗಿದ್ದಾರೆ. ಒಂದು ಮನೆಯಲ್ಲಿ ತಾಯಿ ಮತ್ತು ಮಗಳು ಇರುತ್ತಾರೆ. ಮಗಳಿಗೆ ಮದುವೆ ಮಾಡಿಕೊಡುವುದರಿಂದ ಆಸ್ತಿ ಹಂಚಿ ಹೋಗುತ್ತದೆ. ಇದನ್ನು ತಪ್ಪಿಸಲು ದೇವದಾಸಿಯನ್ನಾಗಿ ಮಾಡಲಾಗುತ್ತದೆ.